ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯದ ದೇವಸ್ಥಾನಗಳ ಅಭಿವೃದ್ಧಿ ಮತ್ತು ದೇವಾಲಯ ಆಧಾರಿತ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಸರ್ಕಾರದ ಗಮನ ಸೆಳೆದರು. ಕೇಂದ್ರ ಸರ್ಕಾರದ ಪ್ರಸಾದ ಯೋಜನೆಗಾಗಿ ಕರ್ನಾಟಕ ಸರ್ಕಾರ 16 ಪ್ರಸ್ತಾವನೆಗಳನ್ನು ಕಳಿಸಿದ್ದರೂ, ಕೇವಲ 2 ಪ್ರಸ್ತಾಪಗಳು ಮಾತ್ರ ಅನುಮೋದನೆಯಾಗಿವೆ. ಉಳಿದ 14 ಪ್ರಸ್ತಾಪಗಳ ಬಗ್ಗೆ ರಾಜ್ಯ ಸರ್ಕಾರವು ಸ್ಪಷ್ಟವಾಗಿ ಉತ್ತರಿಸಬೇಕೆಂದು ಅವರು ಆಗ್ರಹಿಸಿದರು. ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳದ ಆಯೋಜನೆಗೆ ಕೇವಲ 16 ಕೋಟಿ ವೆಚ್ಚ ಮಾಡಿ, ಅದರಿಂದ 4 ಲಕ್ಷ ಕೋಟಿ ಆದಾಯ ಗಳಿಸಿದ್ದು, ಇದನ್ನು ಮಾದರಿಯಾಗಿ ಬಳಸಬೇಕೆಂದು ಹೇಳಿದರು. ಕರ್ನಾಟಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ದೇವಸ್ಥಾನ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಿ, ರಾಜ್ಯದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಬೇಕು ಎಂದು ಒತ್ತಿಹೇಳಿದರು.
ಕಾಪು ಹೊಸ ಮಾರಿಯಮ್ಮ ದೇವಸ್ಥಾನ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಅಧ್ಯಕ್ಷ ವಾಸುದೇವ ಶೆಟ್ಟಿ ಮತ್ತು ಎಂ ಆರ್ ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರ ಮುತುವರ್ಜಿಯಲ್ಲಿ ಊರ ಹಾಗು ಪರವೂರ ಮಹಾ ದಾನಿಗಳಿಂದ 120 ಕೋಟಿಗೂ ಅಧಿಕ ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡಲಾಗಿದೆ. ಇಂತಹ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು. ಸ್ಥಳೀಯ ದೇವಾಲಯಗಳು ಅಭಿವೃದ್ಧಿಯಾಗುವುದರಿಂದ, ಸ್ಥಳೀಯ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯೂ ಸಾಧ್ಯವೆಂದು ಅವರು ಹೇಳಿದರು.
ಕೋಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಭಿವೃದ್ಧಿಗೆ 2,100 ಕೋಟಿ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳಿಸಿದೆ. ಆದರೆ, ಯೋಜನೆಯ ಪ್ರಾಥಮಿಕ ಪ್ರಸ್ತಾವನೆ (DPR) ಸಿದ್ಧಪಡಿಸಲು ಅಗತ್ಯವಾದ 21 ಕೋಟಿ ಜಿಲ್ಲಾಧಿಕಾರಿಗಳಿಂದ ನೀಡಲಾಗಿಲ್ಲ. ಈ ಯೋಜನೆ ರಾಜಕೀಯ ಅಥವಾ ಧರ್ಮದ ಪರಿಧಿ ಮೀರಿಸಿ, ಎಲ್ಲರೂ ಒಗ್ಗೂಡಬೇಕು ಎಂದು ಅವರು ತಿಳಿಸಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವನ್ನು ಪ್ರಸಾದ ಯೋಜನೆಡಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ₹50 ಕೋಟಿ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳಿಸಿದೆ. ಈ ವಿಷಯದಲ್ಲಿ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು, ಸಂಸದರನ್ನು ಸೇರಿಸಿ ಸಭೆ ನಡೆಸಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಮೂಲತಃ ಉತ್ತರ ಕರ್ನಾಟಕದ ಭಕ್ತರು ದಕ್ಷಿಣ ಕನ್ನಡ ಹಾಗೂ ಉಡುಪಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ, ಹಾಗಾಗಿ ಈ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು ಎಂಬುದಾಗಿ ಸಚಿವರು ಒಪ್ಪಿಕೊಂಡಿದ್ದಾರೆ. ಈ ಕುರಿತಂತೆ ಶೀಘ್ರ ಸಭೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಸಭೆಯನ್ನು ಮಾಡಬೇಕು ಎಂದು ಶಾಸಕರಾದ ಶ್ರೀ ಪ್ರತಾಪ್ ಸಿಂಹ ನಾಯಕ್ , ಶ್ರೀ ಮಂಜುನಾಥ್ ಭಂಡಾರಿ, ಶ್ರೀ ಐವಾನ್ ಡಿ ಸೋಜಾ ಅವರು ಬೆಂಬಲ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ತಕ್ಷಣ ಕ್ರಮ ಕೈಗೊಂಡು, ಈ ಯೋಜನೆಗಳ ಅನುಷ್ಠಾನಕ್ಕೆ ತೊಡಗಿಸಬೇಕು ಎಂದು ಶ್ರೀ ಕಿಶೋರ್ ಕುಮಾರ್ ಅವರು ಒತ್ತಾಯಿಸಿದ್ದಾರೆ