ವಾಹನಕ್ಕೆ ಕಟ್ಟಿದ್ದ ಭಾರತದ ಧ್ವಜವನ್ನು ಹರಿದು ಹಾಕಿದ ಉಗ್ರರು
ಲಂಡನ್ : ಲಂಡನ್‌ಗೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮೇಲೆ ಖಲಿಸ್ತಾನ್ ಉಗ್ರರ ಗುಂಪೊಂದು ದಾಳಿ ನಡೆಸಲು ಯತ್ನಿಸಿದ ಮಾಹಿತಿ ಲಭ್ಯವಾಗಿದೆ. ವರದಿಗಳ ಪ್ರಕಾರ ಸಚಿವರು ಶೆವನಿಂಗ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಿಂದ ಹೊರಬಂದ ನಂತರ ಈ ಘಟನೆ ನಡೆದಿದೆ.
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ವ್ಯಕ್ತಿಯೊಬ್ಬ ವಿದೇಶಾಂಗ ಸಚಿವರ ಕಾರಿನ ಕಡೆಗೆ ಓಡಿಹೋಗಿ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದು ಕಾಣಿಸುತ್ತಿದೆ. ಮತ್ತೊಂದು ವೀಡಿಯೊದಲ್ಲಿ ಖಾಲಿಸ್ಥಾನ್ ಉಗ್ರಗಾಮಿಗಳು ಹೊರಗೆ ಧ್ವಜಗಳನ್ನು ಬೀಸುತ್ತಾ ಖಲಿಸ್ಥಾನಿ ಪರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಿಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಬ್ರಿಟನ್, ಅಮೆರಿಕ ಮತ್ತು ಕೆನಡದಲ್ಲಿರುವ ಖಲಿಸ್ಥಾನ್ ಉಗ್ರಗಾಮಿಗಳಿಂದ ಭಾರತೀಯ ರಾಜತಾಂತ್ರಿಕರು ಮತ್ತು ವಲಸಿಗರಿಗೆ ಬೆದರಿಕೆ ಹೆಚ್ಚಾಗಿದೆ. ಈ ವಿವಾದವು ಭಾರತ ಮತ್ತು ಕೆನಡ ನಡುವಿನ ಸಂಬಂಧ ಹಳಸಲು ಕಾರಣವಾಗಿದ್ದರೂ, ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಹೆಚ್ಚಿದ ಚಟುವಟಿಕೆಗಳ ಬಗ್ಗೆ ಭಾರತವು ತನ್ನ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದೆ. ಇದಕ್ಕೂ ಮೊದಲು ಯುಕೆಯಲ್ಲಿ, ಕಂಗನಾ ರನೌತ್ ಅಭಿನಯದ ಎಮರ್ಜೆನ್ಸಿ ಚಿತ್ರ ಪ್ರದರ್ಶನವನ್ನು ತಡೆಯಲು ಖಲಿಸ್ಥಾನ್ ಉಗ್ರಗಾಮಿಗಳು ಲಂಡನ್‌ನ ಹ್ಯಾರೋದಲ್ಲಿರುವ ಚಿತ್ರಮಂದಿರಕ್ಕೆ ನುಗ್ಗಿದ್ದರು. ವಿದೇಶಾಂಗ ಸಚಿವರ ಮೇಲೆ ಹಲ್ಲೆಯತ್ನದ ಕುರಿತು ಭಾರತ ಅಥವಾ ಬ್ರಿಟನ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಖಲಿಸ್ಥಾನಿಗಳು ಹಲವಾರು ಸಂದರ್ಭಗಳಲ್ಲಿ ಜೈಶಂಕರ್ ಸೇರಿದಂತೆ ಅನೇಕ ಭಾರತೀಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು.