ವಾಂತಿಭೇದಿಯಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಕೈದಿಗಳು
ಮಂಗಳೂರು : ಮಂಗಳೂರು ಜೈಲಿನಲ್ಲಿ ನಿನ್ನೆ ವಿಷಾಹಾರ ಸೇವನೆಯಿಂದ ಸುಮಾರು 45 ಕೈದಿಗಳು ಅಸ್ವಸ್ಥರಾಗಿದ್ದು, ಈ ಪೈಕಿ ಓರ್ವ ಕೈದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೈಲಿನಲ್ಲಿ ನೀಡಿದ ಆಹಾರದಿಂದಾಗಿ ಫುಡ್ ಪಾಯಿಸನ್ ಆಗಿ ಹೊಟ್ಟೆನೋವಿನಿಂದ 45 ಕೈದಿಗಳು ನರಳಾಡಿದ್ದಾರೆ. ಏಕಾಏಕಿ ವಾಂತಿ ಮಾಡುತ್ತಾ ಹೊಟ್ಟೆನೋವಿನಿಂದ ಕೈದಿಗಳು ನರಳಾಡಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥ ಕೈದಿಗಳನ್ನ ಇತರ ಕೈದಿಗಳು ತಾವೇ ಹೊತ್ತುತಂದಿದ್ದಾರೆ. ಈ ವೇಳೆ ನಾವು ಆಸ್ಪತ್ರೆಗೆ ಹೋಗುತ್ತೇವೆ ಎಂದು ಕೈದಿಗಳು ಪಟ್ಟು ಹಿಡಿದಿದ್ದರು. ಆಕ್ರೋಶಗೊಂಡಿದ್ದ ಕೈದಿಗಳನ್ನ ವಾಹನದಿಂದ ಕೆಳಗಿಳಿಸಿದ ಪೊಲೀಸರು, ಅಸ್ವಸ್ಥ ಕೈದಿಗಳನ್ನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆ ಬಳಿಕ ಜೈಲಿನಲ್ಲಿ ಪೊಲೀಸರ ವಿರುದ್ಧ ಕೈದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ ಉಪಹಾರ ಸೇವಿಸಿದ ಬಳಿಕ ಕೆಲವರು ಹೊಟ್ಟೆನೋವು ಎಂದು ಕೈದಿಗಳು ದೂರು ನೀಡಿದ್ದಾರೆ. ಸಂಜೆ 4.30ರ ಬಳಿಕ 40ಕ್ಕೂ ಅಧಿಕ ಕೈದಿಗಳಿಗೆ ಹೊಟ್ಟೆ ನೋವು ಸೇರಿದಂತೆ ವಾಂತಿ ಭೇದಿ ಶುರುವಾಗಿದೆ. ಪೊಲೀಸ್ ವ್ಯಾನ್ ಮೂಲಕ ಎಲ್ಲ ಕೈದಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 45 ಜನರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ ಎಂದು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪಡೆದು ಜೈಲಿಗೆ ಭೇಟಿ ನೀಡಿದ್ದಾರೆ. ನೀರಿನ ಸ್ಯಾಂಪಲ್ ಹಾಗೂ ಆಹಾರವನ್ನ ಪರಿಶೀಲನೆ ಮಾಡಿದ್ದಾರೆ. ಒಬ್ಬ ಕೈದಿಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 44 ಜನ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಬೆಳಗ್ಗಿನ ಆಹಾರ ಕೆಟ್ಟುಹೋಗಿರುವ ಮಾಹಿತಿ ಇದೆ. ಜೈಲಿನ ಮುಖ್ಯ ಅಧೀಕ್ಷಕ ಕೈದಿಗಳಿಗೆ ಅವಲಕ್ಕಿ, ಸಾಂಬಾರ್, ಅನ್ನ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಆಹಾರದಿಂದ ಸಮಸ್ಯೆ ಎಂದು ಹೇಳುತ್ತಿದ್ದಾರೆ. ವಿವಿಧ ವಾರ್ಡ್ನ ಸುಮಾರು 350 ಕೈದಿಗಳ ಪೈಕಿ 45 ಜನಕ್ಕೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.