ಸ್ಪೀಕರ್ ಖಾದರ್ ಬೆಂಬಲ; ಸರಕಾರದಿಂದ ನಿಯಮ ಸರಳ ಮಾಡುವ ಭರವಸೆ
ಬೆಂಗಳೂರು: ಕಾರ್ಕಳದ ಮುಂಡ್ಲಿಯಲ್ಲಿ ಕಳೆದ ಜ.14ರಂದು ಪೊಲೀಸರು ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸಿ ಅರ್ಧಕ್ಕೆ ಮೊಟಕುಗೊಳಿಸಿ ಆಯೋಜಕರ ಮೇಲೆ ಕೇಸ್ ದಾಖಲಿಸಿದ ಪ್ರಕರಣವನ್ನು ನಿನ್ನೆ ಸದನದಲ್ಲಿ ಪ್ರಸ್ತಾಪಿಸಿದ ಶಾಸಕ ಸುನಿಲ್ ಕುಮಾರ್ ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನಕ್ಕಿರುವ ನಿಯಮಗಳನ್ನು ಸರಳಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಗಮನ ಸೆಳೆಯುವ ಸೂಚನೆ ವೇಳೆ ಸುನಿಲ್ ಕುಮಾರ್ ವಿಷಯ ಪ್ರಸ್ತಾಪಿಸಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಯಕ್ಷಗಾನ ಪ್ರದರ್ಶನಗಳನ್ನು ನಿಲ್ಲಿಸಿ ಎಫ್‌ಐಆರ್ ದಾಖಲು ಮಾಡುತ್ತಿದ್ದಾರೆ. ಧ್ವನಿವರ್ಧಕ ಬಳಕೆ ಸೇರಿದಂತೆ ಹಲವು ಅಡೆತಡೆಗಳು ಇವೆ. ಹೀಗಾಗಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಸರಳಗೊಳಿಸಿ ಎಂದು ಮನವಿ ಮಾಡಿದರು.
ಈ ವೇಳೆ ಸ್ಪೀಕರ್ ಖಾದರ್ ಮಾತನಾಡಿ, ಮೊದಲು ಈ ರೀತಿ ಇರಲಿಲ್ಲ. ರಾತ್ರಿ 10 ಗಂಟೆ ಮೇಲೆ ಧ್ವನಿವರ್ಧಕ ಬಳಸಬಾರದು ಎಂದು ನಿಯಮ ತಂದರು. ಆದಾದ ಮೇಲೆ ಒಂದೊಂದು ಕಡೆ ಒಬ್ಬೊಬ್ಬ ಅಧಿಕಾರಿ ಒಂದೊಂದು ನಿಯಮ ಮಾಡುತ್ತಿದ್ದಾರೆ. ಸರ್ಕಾರ ಸರಿಪಡಿಸಬೇಕು ಎಂದು ಸೂಚಿಸಿದರು.
ಗೃಹ ಸಚಿವರ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉತ್ತರ ನೀಡಿ, ನಮ್ಮ ಸಂಸ್ಕೃತಿಗೆ ತೊಂದರೆ ಆಗಬಾರದು. ಯಕ್ಷಗಾನ, ಬಯಲಾಟ ನಮ್ಮ ದೇಶದ ಆಸ್ತಿ, ಇದನ್ನು ನಿಲ್ಲಿಸಲು ಆಗುವುದಿಲ್ಲ. ಯಾವುದೇ ಸಮಸ್ಯೆ ಇಲ್ಲದೆ ನಿಯಮ ಸರಳ ಮಾಡುತ್ತೇವೆ. ಮಧ್ಯರಾತ್ರಿ ನಿಲ್ಲಿಸುವಂತೆ ಯಾರೂ ಹೇಳಲ್ಲ. ಗೃಹ ಸಚಿವರು ಬರಲಿ ಅದನ್ನ ಸರಿ ಮಾಡೋಣ ಎಂದು ಭರವಸೆ ನೀಡಿದರು.
ಈ ವೇಳೆ ಊರುಗಳಲ್ಲಿ ನಾಟಕ ಪ್ರದರ್ಶನಕ್ಕೂ ಅಡೆತಡೆ ಉಂಟಾಗುತ್ತಿದೆ ಎಂದು ಶಾಸಕ ನೇಮಿರಾಜ್ ನಾಯ್ಕ್ ಪ್ರಸ್ತಾಪಿಸಿದರೆ ಕೋಳಿ ಅಂಕ, ನಾಗಮಂಡಲಕ್ಕೂ ಅಡೆತಡೆ ಉಂಟುಮಾಡುತ್ತಿದ್ದಾರೆ. ಅದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶ ಮಾಡಿದ ಸುನೀಲ್ ಕುಮಾರ್, ಕೋಳಿ ಅಂಕ ಮೊದಲಿನಿಂದಲೂ ಇದೆ. ಕೋಳಿ ಅಂಕದ ಕೋಳಿ ರುಚಿ ಬಹಳ ಚೆನ್ನಾಗಿದೆ. ನೀವು ಬಂದರೆ ಆ ರುಚಿ ತೋರಿಸುತ್ತೇವೆ ಎಂದು ಡಿಕೆಶಿಗೆ ಹೇಳಿದರು.