ಹೋಟೆಲ್‌ಗಳಲ್ಲಿ ಇಡ್ಲಿಗೆ ಬೇಡಿಕೆ ಕುಸಿತ; ದೋಸೆಯತ್ತ ವಾಲಿದ ಗ್ರಾಹಕರು
ಬೆಂಗಳೂರು : ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಶೀಟ್ ಬಳಸಿ ಇಡ್ಲಿ ತಯಾರಿಸುವ ವಿಚಾರ ಬಯಲಾದ ಬೆನ್ನಿಗೆ ಜನರು ಇಡ್ಲಿ ತಿನ್ನಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಕೆಲವು ಹೋಟೆಲ್‌ಗಳ ಇಡ್ಲಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಅಂಶ ಪತ್ತೆಯಾದ ಬೆನ್ನಲ್ಲೇ ಇಡ್ಲಿಗೆ ಬೇಡಿಕೆ ಕುಸಿತ ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಇಡ್ಲಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರಿನ ದರ್ಶಿನಿಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಜನರ ಅತ್ಯಂತ ಪ್ರಿಯವಾದ ಇಟ್ಲಿಯ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ.
ಇಡ್ಲಿ ಅತ್ಯಂತ ಸುರಕ್ಷಿತ ಆಹಾರ ಎಂಬ ಭಾವನೆ ಜನರಲ್ಲಿತ್ತು. ದಕ್ಷಿಣ ಭಾರತದ ಬಹುತೇಕ ಹೋಟೆಲ್‌ಗಳಲ್ಲಿ ಇಡ್ಲಿ ಒಂದು ಸಾಮಾನ್ಯ ತಿಂಡಿಯಾಗಿದ್ದು, ಜನರು ಕೂಡ ಬೆಳಗ್ಗಿನ ಉಪಾಹಾರಕ್ಕೆ ಇದನ್ನೇ ಆರ್ಡರ್ ಮಾಡುತ್ತಾರೆ. ಸುಲಭವಾಗಿ ಜೀರ್ಣವಾಗುವ, ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದ ಇಡ್ಲಿ ಎಲ್ಲ ವಯೋಮಾನದವರಿಗೂ ಇಷ್ಟದ ತಿಂಡಿಯಾಗಿತ್ತು. ರಾಸಾಯನಿಕ ಅಂಶ ಪತ್ತೆಯಾದ ಬಳಿಕ ಹೋಟೆಲ್‌ಗಳಲ್ಲಿ ಇಡ್ಲಿ ತಿನ್ನಲು ಜನರು ಹಿಂದೆಮುಂದೆ ನೋಡುವಂತಾಗಿದೆ.
ಸಾಮಾನ್ಯ ಗ್ರಾಹಕರು ಇಡ್ಲಿ ಆರ್ಡರ್ ಮಾಡಲು ಹಿಂಜರಿಯುವುದು ಕಂಡುಬಂದಿದೆ ಎಂದು ಹೋಟೆಲ್ ಉದ್ಯಮದ ಮೂಲಗಳು ತಿಳಿಸಿವೆ. ಕೆಲವು ಗ್ರಾಹಕರು, ಇಡ್ಲಿ ತಯಾರಿಸಲು ಬಟ್ಟೆಯನ್ನು ಬಳಸಲಾಗುತ್ತಿದೆಯೇ ಎಂದು ವಿಚಾರಿಸಿಕೊಂಡು ಆರ್ಡರ್ ಮಾಡುತ್ತಿದ್ದಾರೆ.
ದಿನವಿಡೀ ಫ್ರೆಷ್ ಇಡ್ಲಿ ತಯಾರಿಸಲಾಗುತ್ತದೆ. ಆದರೆ ಆಹಾರ ಇಲಾಖೆಯ ತಪಾಸಣೆ ಸುದ್ದಿ ಬಂದ ನಂತರ ಗ್ರಾಹಕರ ಆದ್ಯತೆಗಳು ಬದಲಾಗಿವೆ. ಇದು ಮಾರಾಟದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಗ್ರಾಹಕರು ಇಡ್ಲಿ ಬದಲಾಗಿ ದೋಸೆ ಮತ್ತಿತರ ತಿಂಡಿಗಳಿಗೆ ಆದ್ಯತೆ ನೀಡುತ್ತಾರೆ. ದೋಸೆ ತಯಾರಿವುದು ಕಣ್ಣೆದುರೇ ಕಾಣಿಸುವುದರಿಂದ ಅದು ಹೆಚ್ಚು ಸುರಕ್ಷಿತವೆಂದು ಗ್ರಾಹಕರು ಭಾವಿಸುತ್ತಾರೆ ಎಂದು ಮಾಲೀಕರು ತಿಳಿಸಿದ್ದಾರೆ.
ಇತ್ತೀಚೆಗೆ ಆಹಾರ ಇಲಾಖೆಯು ರಾಜ್ಯದ ಹಲವು ಕಡೆಗಳಲ್ಲಿ ಇಡ್ಲಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಅವುಗಳಲ್ಲಿ ಹಲವು ಸ್ಯಾಂಪಲ್ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಾರ, ಎಲ್ಲ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿತ್ತು.
ಇಡ್ಲಿಯನ್ನು ತೆಲು ಬಟ್ಟೆಯ ಮೇಲೆ ಹೊಯ್ದು ಬೇಯಿಸಲು ಇಡುವುದು ಮಾಮೂಲು ವಿಧಾನ. ಆದರೆ ಕೆಲವು ಹೋಈಟೆಲಿನವರು ಬಟ್ಟೆ ಬದಲಾಗಿ ಸುಲಭವಾಗಿ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಇಡ್ಲಿಯ ವಿಧಿವಿಜ್ಞಾನ ಪರೀಕ್ಷೆ ನಡೆಸಿದಾಗಾದರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಇಡ್ಲಿ ಬೇಯಸಲು ಪ್ಲಾಸ್ಟಿಕ್ ಬಳಸುವುದನ್ನು ಸರಕಾರ ನಿಷೇಧಿಸಿದೆ. ಕೇಂದ್ರ ಸರಕಾರವೂ ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ.