ಚಾಂಪಿಯನ್ಸ್‌ ಟ್ರೋಫಿ : ಇಂದು ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್‌ ಫೈಟ್‌

ಆರು ಪ್ರಮುಖ ಆಟಗಾರರಿಲ್ಲದೆ ಆಸೀಸ್‌ ಕಂಗಾಲು, ಇಂಡಿಯಾಕ್ಕೆ ಸೆಲೆಕ್ಷನ್‌ ಕಗ್ಗಂಟು

ದುಬೈ : ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್‌ ಪಂದ್ಯ ಇಂದು ದುಬೈಯಲ್ಲಿ ನಡೆಯಲಿದ್ದು, ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್​​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂಬುದು ವಿಶೇಷ. ಏಕೆಂದರೆ ಆಸೀಸ್ ಪಡೆಯ 6 ಮಂದಿ ಈಗಾಗಲೇ ನಾನಾ ಕಾರಣಗಳಿಂದಾಗಿ ಹೊರಗುಳಿದಿದ್ದಾರೆ.

ಟೂರ್ನಿ ಆರಂಭಕ್ಕೂ ಮುನ್ನ ಮತ್ತು ಆ ಬಳಿಕ ತಂಡದಿಂದ ಪ್ಯಾಟ್ ಕಮಿನ್ಸ್ , ಜೋಶ್ ಹ್ಯಾಝಲ್​ವುಡ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್ ಹೊರಗುಳಿದಿರುವ ಕಾರಣ ಮೇಲ್ನೋಟಕ್ಕೆ ಆಸ್ಟ್ರೇಲಿಯಾ ತುಸು ದುರ್ಬಲವಾಗಿರುವಂತೆ ಕಾಣಿಸುತ್ತದೆ. ಆದರೆ ಯಾವ ಕ್ಷಣದಲ್ಲೂ ಸಿಡಿದೇಳುವ ತಾಕತ್ತು ಆಸೀಸ್‌ ಆಟಗಾರರಿಗೆ ಇದೆ ಎನ್ನುವು ಎಚ್ಚರಿಕೆ ಭಾರತಕ್ಕಿರಬೇಕು. ಅದರಲ್ಲೂ ಭಾರತದ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾದವರು ಜಿದ್ದಿಗೆ ಬಿದ್ದಂತೆ ಆಡುತ್ತಾರೆ.





























 
 

ಪ್ಯಾಟ್ ಕಮಿನ್ಸ್ ಅವರ ಅಲಭ್ಯತೆಯ ನಡುವೆ ಸ್ಟೀವ್ ಸ್ಮಿತ್ ಆಸೀಸ್ ಪಡೆಯನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಅಸಲಿ ಅಗ್ನಿ ಪರೀಕ್ಷೆ ಎದುರಾಗಿರುವುದು ಸೆಮಿಫೈನಲ್​ನಲ್ಲಿ. ಏಕೆಂದರೆ ಈ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನು ಎದುರಿಸಬೇಕಿದೆ. ಪ್ರಮುಖ ಆಟಗಾರರ ಅಲಭ್ಯತೆಯ ನಡುವೆ ಈ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಈಗ ಕುತೂಹಲ. ಆಸ್ಟ್ರೇಲಿಯಾ ಹೆಚ್ಚುವರಿ ಸ್ಪಿನ್ನರ್​ ಜೊತೆ ಕಣಕ್ಕಿಳಿಯಲು ಬಯಸಿದರೆ ಕ್ಯಾರಿ ಅಥವಾ ಇಂಗ್ಲಿಸ್​ಗೆ ಮುಂಬಡ್ತಿ ನೀಡುವ ಸಾಧ್ಯತೆಯಿದೆ. ಇದರ ಹೊರತಾಗಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಬೌಲರ್​ಗಳನ್ನೇ ಮುಂದುವರೆಸಲು ಬಯಸಿದರೆ ಟ್ರಾವಿಸ್ ಹೆಡ್ ಹಾಗೂ ಜೇಕ್ ಫ್ರೇಸರ್ ಮೆಕ್​ಗುರ್ಕ್​ ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.
ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಇಬ್ಬರು ಪರಿಪೂರ್ಣ ವೇಗಿಗಳನ್ನು ಕಣಕ್ಕಿಳಿಸಿತ್ತು. ಮೂರನೇ ಪಂದ್ಯದಲ್ಲಿ ಇಬ್ಬರು ಪರಿಪೂರ್ಣ ಸ್ಪಿನ್ನರ್​ಗಳೊಂದಿಗೆ ಆಡಿದೆ. ಇದೀಗ ಸೆಮಿಫೈನಲ್​ನಲ್ಲಿ ಸ್ಪಿನ್ನರ್​ಗೆ ಒತ್ತು ನೀಡುವುದಾ ಅಥವಾ ವೇಗಿಗಳಿಗೆ ಮಣೆ ಹಾಕುವುದಾ ಎಂಬ ಚಿಂತೆಯೊಂದು ಟೀಮ್ ಇಂಡಿಯಾಗಿದೆ.

ಟೀಮ್ ಇಂಡಿಯಾ ಆಡಿದ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿದೆ. ಅದರಲ್ಲೂ ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ವೇಗಿ ಹರ್ಷಿತ್ ರಾಣಾ ಬದಲಿಗೆ ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸಲಾಗಿತ್ತು. ಹೀಗೆ ಸಿಕ್ಕ ಅವಕಾಶದಲ್ಲಿ ವರುಣ್ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಅಲ್ಲದೆ 5 ವಿಕೆಟ್ ಕಬಳಿಸಿಯೂ ಮಿಂಚಿದ್ದಾರೆ. ಸೆಮಿಫೈನಲ್​ನಲ್ಲಿ ವರುಣ್ ಚಕ್ರವರ್ತಿಯನ್ನು ಕಣಕ್ಕಿಳಿಸಲು ಬಯಸಿದರೆ, ಹರ್ಷಿತ್ ರಾಣಾ ಅವರನ್ನು ಕೈ ಬಿಡಬೇಕಾಗುತ್ತದೆ. ಇದರಿಂದ ಮೊಹಮ್ಮದ್ ಶಮಿ ರೂಪದಲ್ಲಿ ಏಕೈಕ ಪರಿಪೂರ್ಣ ವೇಗಿಯನ್ನು ಮಾತ್ರ ಆಡಿಸಲು ಸಾಧ್ಯವಾಗುತ್ತದೆ.

ಇನ್ನು ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿಯನ್ನು ಕಣಕ್ಕಿಳಿಸಲು ಬಯಸಿದರೆ, ಕುಲ್ದೀಪ್ ಯಾದವ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಬೇಕಾಗುತ್ತದೆ. ಆದರೆ ಅನುಭವಿ ಸ್ಪಿನ್ನರ್ ಕುಲ್ದೀಪ್ ಅವರನ್ನು ನಿರ್ಣಾಯಕ ಪಂದ್ಯಕ್ಕೂ ಮುನ್ನ ಕೈ ಬಿಡುವ ದುಸ್ಸಾಹಸಕ್ಕೆ ಟೀಮ್ ಇಂಡಿಯಾ ಕೈ ಹಾಕಲಿದೆಯಾ ಎಂಬುದೇ ಪ್ರಶ್ನೆ. ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಸ್ಪಿನ್ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾದರೆ, ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಕಣಕ್ಕಿಳಿಯಲಿದ್ದಾರೆ. ಅತ್ತ ಹರ್ಷಿತ್ ರಾಣಾ ನಿರ್ಣಾಯಕ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮೊಹಮ್ಮದ್ ಶಮಿಗೆ ಜೊತೆ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ.

ಈ ಮೂಲಕ ಟೀಮ್ ಇಂಡಿಯಾ 8+3 ಸಂಯೋಜನೆಯಲ್ಲಿ ಪ್ಲೇಯಿಂಗ್ ಇಲೆವೆನ್ ರೂಪಿಸಬಹುದು. ಅದರಂತೆ ಇಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ಶುಭ್​ಮನ್ ಗಿಲ್ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ನಾಲ್ಕನೇ ಮತ್ತು ಐದನೇ ಕ್ರಮಾಂಕಗಳಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದು, ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top