ಮಂಗಳೂರು: ಮಾದಕ ವಸ್ತು ಸೇವನೆ ಹಾಗೂ ಮಾರಾಟ ಮಾಡಿದ್ದಾರೆ ಎಂಬ ಎರಡು ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವೈಶಾಖ್, ಅರವಿಂದ್, ಇಸ್ಮಾಯಿಲ್ ಸೊಹೈಲ್ ಎಂದು ಪತ್ತೆಹಚ್ಚಲಾಗಿದೆ.
ಉಳ್ಳಾಲ ಗ್ರಾಮದ ಮೊಗವೀರಪಟ್ಟ ಬೀಚ್ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವೈಶಾಖ್ ಎಂಬುವವನನ್ನು ಮಂಗಳೂರಿನ ಸೆನ್ ಪೊಲೀಸರು ಬಂಧಿಸಿದ್ದಾರೆ. ಜಪ್ಪಿನಮೊಗರು ಸಮೀಪದ ಕುಡ್ಡಾಡಿ ರೈಲ್ವೆ ಅಂಡರ್‌ಪಾಸ್ ರಸ್ತೆಯಿಂದ ಸೂಟರ್‌ಪೇಟೆ ಹಾದು ಹೋಗುವ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಬಳಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಅರವಿಂದ್ (32)ನನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದಲ್ಲದೆ, ಆತನಿಂದ ಬಿಳಿ ಬಣ್ಣದ ಹರಳಿನಂತೆ ತೋರುವ 1.45 ಗ್ರಾಂ ಎಂಡಿಎಂಎ, 238 ಗ್ರಾಂ ಗಾಂಜಾ, ಮೊಬೈಲ್, ಬ್ಯಾಟರಿ ಚಾಲಿತ ತೂಕ ಯಂತ್ರ, ಪ್ಲಾಸ್ಟಿಕ್ ಜಿಪ್‌ಲಾಕ್ ಕವರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ಒಟ್ಟು ಮೌಲ್ಯ 15 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ ಆರೋಪಿ ಇಸ್ಮಾಯಿಲ್ ಸೊಹೈಲ್ ಎಂಬವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
























