ಡಿಕೆಶಿ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಹೇಳಿಕೆಗೆ ನಾನಾ ಬಣ್ಣ
ಕಾರ್ಕಳ: ಮುಖ್ಯಮಂತ್ರಿ ಹುದ್ದೆಗಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟದ ನಡುವೆಯೇ ನಿನ್ನೆ ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ನೀಡಿದ ಹೇಳಿಕೆಯೊಂದು ಭಾರಿ ಸಂಚಲನ ಉಂಟುಮಾಡಿದೆ. ರಾಜಕೀಯ ವಲಯದಲ್ಲಿ ಈ ಹೇಳಿಕೆಗೆ ನಾನಾ ರೀತಿಯ ಬಣ್ಣ ಬಳಿದು ವಿಶ್ಲೇಷಿಸಲಾಗುತ್ತಿದೆ.
ಕಾರ್ಕಳದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ವೀರಪ್ಪ ಮೊಯ್ಲಿಯವರು ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿಯೇ ʼಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ತೀರ್ಮಾನ ಆಗಿರುವ ವಿಷಯ. ಅವರು ಮುಖ್ಯಮಂತ್ರಿಯಾಗುವುದನ್ನು ಯಡೆಯಲು ಯಾರಿಂದಲೂ ಸಾಧ್ಯವಿಲ್ಲ, ಎಲ್ಲವೂ ಕಾಲಕ್ಕೆ ಸಂಬಂಧಪಟ್ಟ ವಿಚಾರʼ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಡಿ.ಕೆ ಶಿವಕುಮಾರ್‌ಗೆ ಎಂಎಲ್‌ಎ ಟಿಕೆಟ್ ಮೊದಲು ಕೊಡಿಸಿದ್ದು ನಾನೇ. ಡಿ.ಕೆ.ಶಿವಕುಮಾರ್ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರೂ ಕೂಡ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಸಿಎಂ ಹುದ್ದೆ ಯಾರೂ ಕೊಡುವ ವರ ಅಲ್ಲ. ಅದು ಡಿ.ಕೆ ಶಿವಕುಮಾರ್ ಸಂಪಾದನೆ ಮಾಡಿರುವ ಶಕ್ತಿ. ಕಾರ್ಕಳದ ಈ ಪುಣ್ಯಭೂವಿಯಲ್ಲಿ ಆಡಿದ ಮಾತು ನೂರಕ್ಕೆ ನೂರು ಸತ್ಯ. ಕೋಟಿ ಕೋಟಿ ಪ್ರಯತ್ನ ಮಾಡಿದರೂ ಡಿಕೆಶಿಗೆ ಸಿಎಂ ಹುದ್ದೆ ತಪ್ಪಿಸಲು ಆಗುವುದಿಲ್ಲ ಎಂದು ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.
ಡಿ.ಕೆ.ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು. ಡಿ.ಕೆ.ಶಿವಕುಮಾರ್ ಗೊಮ್ಮಟೇಶ್ವರನಂತೆ ಎತ್ತರಕ್ಕೆ ಬೆಳೆಯಲಿ. ಕಾರ್ಕಳ ಗೊಮ್ಮಟೇಶ್ವರನ ಪುಣ್ಯಭೂಮಿ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿರುವಾಗ ಸಂಚಲನ ಮೂಡಿಸಿದ್ದಾರೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಡಾ.ಎಂ ವೀರಪ್ಪ ಮೊಯ್ಲಿ ಸಿಕ್ಕಾಪಟ್ಟೆ ಹೊಗಳಿದ್ದಾರೆ. ಜೊತೆಗೆ ವಿನಃ ಕಾರಣ ನೀವು ಯಾವುದಕ್ಕೂ ಪ್ರತಿಕ್ರಿಯೆ ಕೊಡಬೇಡಿ. ನಿಮ್ಮ ವಿರುದ್ಧ ಹೇಳಿಕೆಗಳು ಬರುತ್ತೆ ಹೋಗುತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಲಹೆಯನ್ನೂ ನೀಡಿದ್ದಾರೆ.
ಇದಕ್ಕುತ್ತರವಾಗಿ ವೀರಪ್ಪ ಮೊಯ್ಲಿಯವರನ್ನು ಡಿಕೆಶಿ ತನ್ನ ರಾಜಕೀಯ ಗುರು ಎಂದು ಬಣ್ಣಿಸಿದ್ದಾರೆ. ಹೀಗೆ ಈ ಇಬ್ಬರು ಪ್ರಭಾವಿ ನಾಯಕರ ನಡುವಿನ ಹೊಗಳಿಕೆಯ ಜುಗಲ್‌ಬಂದಿಗೆ ರಾಜ್ಯ ರಾಜಕೀಯದಲ್ಲಿ ಬೇರೆಯೇ ಅರ್ಥ ಕಲ್ಪಿಸಲಾಗಿದೆ. ಕಾರ್ಕಳದಲ್ಲಿ ದಿಢೀರ್ ಎಂದು ಆಯೋಜನೆಯಾದ ಕುಟುಂಬೋತ್ಸವ ಕಾರ್ಯಕ್ರಮವೇ ವೀರಪ್ಪ ಮೊಯ್ಲಿಯವರು ಹೂಡಿದ ಬಾಣ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ ಸನ್ಮಾನ ಮಾಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡುವ ಉದ್ದೇಶ ಇದರ ಹಿಂದೆ ಇತ್ತು. ಎಲ್ಲವೂ ಲೆಕ್ಕಾಚಾರ ಪ್ರಕಾರದಂತೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.