ಗೋಕಾಕ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಪ್ರಕರಣದ ಸೂತ್ರಧಾರಿ
ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ 5 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ, ರಾಮಗನಟ್ಟಿ ಗೋಕಾಕ್ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಮಂಜುಳಾ ರಾಮಗನಟ್ಟಿಯನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಹಿಂದೆ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಘಟಪ್ರಭಾ ಠಾಣೆ ಪೊಲೀಸರು ಕೇವಲ 24ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ್ದು, ಅಪಹರಣವಾಗಿದ್ದ ಉದ್ಯಮಿಯನ್ನು ರಕ್ಷಿಸಿದ್ದಾರೆ.
ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು. ಪ್ರಕರಣ ದಾಖಲಾದ ಕೇವಲ 24 ಗಂಟೆಯಲ್ಲಿ ಘಟಪ್ರಭಾ ಪೊಲೀಸರು ಪ್ರಕರಣವನ್ನ ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿ ಉದ್ಯಮಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ (48) ಫೆಬ್ರವರಿ 14ರಂದು ರಾತ್ರಿ 11 ಗಂಟೆ ಸುಮಾರಿಗೆ ಮಿರಜ್ ದಿಂದ ಮನೆಗೆ ಬರುತ್ತಿರುವಾಗ ಅಪಹರಣ ಮಾಡಲಾಗಿತ್ತು. ಮರುದಿನ ಬಸವರಾಜ ಅಂಬಿ ಅವರ ಪತ್ನಿ ಶೋಭಾಗೆ ಕರೆ ಮಾಡಿದ್ದ ಅಪಹರಣಕಾರರು 5 ಕೋಟಿ ಹಣ ನೀಡಿ ಗಂಡನನ್ನು ಬಿಡಿಸಿಕೊಂಡು ಹೋಗುವಂತೆ ಹೇಳಿದ್ದರು. ಇದರಿಂದ ಭಯಗೊಂಡ ಶೋಭಾ ತನ್ನ ಮಗನಿಗೆ ವಿಚಾರ ತಿಳಿಸಿ, 10 ಲಕ್ಷ ಹಣ ನೀಡಿ ಪತಿ ಬಸವರಾಜ ಅಂಬಿಯನ್ನು ಬಿಡಿಸಿಕೊಂಡು ಬರಲು ಆರೋಪಿಗಳು ತಿಳಿಸಿದ್ದ ನಿಪ್ಪಾಣಿಯ ಬಳಿಯ ದಾಬಾಗೆ ಹೋಗಿದ್ದರು.
ಶೋಭಾ ಸೇರಿದಂತೆ 4-5 ಜನ ಸ್ಥಳಕ್ಕೆ ಬಂದಿದ್ದನ್ನು ಗಮನಿಸಿದ ಆರೋಪಿ ಆ ದಿನ ಭೇಟಿಯಾಗಿರಲಿಲ್ಲ. ಮತ್ತೊಮ್ಮೆ ಕರೆ ಮಾಡಿ ಒಬ್ಬರೇ ಬಂದು 5 ಕೋಟಿ ಕೊಡುವಂತೆ ಹೇಳಿದ್ದರು. ಆಗಲು ಸಕ್ಸಸ್ ಆಗಿರಲಿಲ್ಲ. ನಂತರ ಶೋಭಾ ಫೆಬ್ರವರಿ 18ರ ರಾತ್ರಿ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ಅಪಹರಣ ದೂರು ಕೊಟ್ಟಿದ್ದಾರೆ.
ತಕ್ಷಣ ಮೂರು ತಂಡಗಳನ್ನು ರಚಿಸಿದ ಎಸ್.ಪಿ ಡಾ.ಭೀಮಾಶಂಕರ್ ಅಪಹರಣಕ್ಕೊಳಗಾದ ವ್ಯಕ್ತಿಯ ಪತ್ತೆಗೆ ಸೂಚನೆ ನೀಡಿದ್ದರು. ಫೋನ್ ಲೋಕೇಷನ್ ಆಧಾರದ ಮೇಲೆ ಶೋಧ ಕಾರ್ಯ ಶುರು ಮಾಡಿದ್ದ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಅಪಹರಣಕ್ಕೊಳಗಾದ ಬಸವರಾಜ ಅವರನ್ನು ರಕ್ಷಣೆ ಮಾಡಿ, ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಕರಣದ ಪ್ರಮುಖ ಆರೋಪಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ಎಂಬ ವಿಚಾರ ಬಹಿರಂಗವಾಗಿದೆ. ಮಂಜುಳಾ ಭಾಗಿಯಾಗಿರುವ ಕುರಿತು ಸ್ವತಃ ಆಕೆಯ ಪುತ್ರ ಈಶ್ವರನನ್ನು ಬಾಯಿಬಿಟ್ಟಿದ್ದಾನೆ. ತಾಂತ್ರಿಕ ಸಾಕ್ಷ್ಯ, ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾಳನ್ನು ಬಂಧಿಸಲಾಗಿದೆ.