ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ ಜಿಲ್ಲಾ ಸಮಿತಿಯಿಂದ ದ.ಕ ಜಿಲ್ಲೆಯ ರೈತರ ಹಲವಾರು ವರ್ಷಗಳಿಂದ ಇರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.1 ರಂದು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಹಲವು ವರ್ಷಗಳಿಂದ ಬಾಕಿಯಿರುವ ಅಕ್ರಮ-ಸಕ್ರಮ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಕುಮ್ಕಿ ಹಕ್ಕು ಅನುಭವಿಸುತ್ತಿರುವವರಿಗೆ ಭೂಮಿಯನ್ನು ಮಂಜೂರುಗೊಳಿಸಬೇಕು. ಹವಾಮಾನ ವೈಪರೀತ್ಯ ಹಾಗೂ ಪ್ರಾಕೃತಿಕ ವಿಕೋಪದಿಂದ ಶೇ.೭೫ ರೈತರು ನಷ್ಟ ಉಂಟಾಗಿದ್ದು ಪ್ರತಿ ಎಕರೆಗೆ ರೂ.೧ಲಕ್ಷ ಪರಿಹಾರ ಘೋಷಿಸಬೇಕು. ಯಶಸ್ವಿನಿ ಯೋಜನೆಯನ್ನು ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೂ ಅನ್ವಯಿಸಬೇಕು. ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಕೃಷಿಕರಿಗೆ ನೀಡಿರುವ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಿ ಋಣಮುಕ್ತಗೊಳಿಸಬೇಕು. ಜಿಲ್ಲೆಯಲ್ಲಿ ಹಾದುಹೋಗುತ್ತಿರುವ 400 ಕೆ.ವಿ ವಿದ್ಯುತ್ ಪ್ರಸರಣದ ಮಾರ್ಗವನ್ನು ಸ್ಥಗಿತಗೊಳಿಸಿ ಪರ್ಯಾಯ ಮಾರ್ಗದ ಮೂಲಕ ನಡೆಸಬೇಕು. ಮಾಡಾವು-ಸುಳ್ಯ ೧೧೦ ಕೆ.ವಿ ವಿದ್ಯುತ್ ಪ್ರಸರಣದ ಮಾರ್ಗವನ್ನು ಜಂಟಿ ಸರ್ವೆ ನಡೆಸಿ ಕಾರ್ಯಗತಗೊಳಿಸಬೇಕು. ಕೋವಿ ಪರವಾಣಿಗೆಯನ್ನು ವಂಶ ಪಾರಂಪರ್ಯಗತವಾಗಿ ಬದಲಾವಣೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಮಾತನಾಡಿ, ರೈತರು ಮಳೆ, ಬಿಸಿಲು ಎನ್ನದೆ ವರುಷವಿಡೀ ಕಷ್ಟು ದುಡಿದು ಕೃಷಿಯನ್ನು ಉಳಿಸುತ್ತಿದ್ದರೆ ಅಧಿಕಾರಿಗಳು ಹಾಗೂ ನಮ್ಮಂದಿ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ಎಸಿ ರೂಂನಲ್ಲಿ ಕುಳಿತು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ರೈತರಿಗೆ ತೊಂದರೆ ಅಗದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆದರೆ ಉತ್ರಮ. ಇಲ್ಲದಿದ್ದರೆ ಎಲ್ಲರನ್ನು ಒಟ್ಟು ಸೇರಿ ತೀವ್ರ ತರದಲ್ಲಿ ಹೋರಾಟ ನಡೆಸಲಿದ್ದೇವೆ ಎಂದರು.
ಸವಣೂರು ವಲಯದ ಗೌರವಾಧ್ಯಕ್ಷ ಶಿವಣ್ಣ ಇಡ್ಯಾಡಿ ಮಾತನಾಡಿ, ಸರಕಾರಿ ಇಲಾಖೆಯಲ್ಲಿರುವ ಅಧಿಕಾರಿಗಳೆಲ್ಲರೂ ರೈತರ ಮಕ್ಕಳೇ ಆಗಿದ್ದಾರೆ. ದೊಡ್ಡ ಹುದ್ದೆ ಪಡೆದ ಬಳಿಕ ಅದೆಲ್ಲಾವನ್ನು ಅಧಿಕಾರಿಗಳು ಮರೆತಿದ್ದಾರೆ.
ರೈತರು ದೇಶದ ಬೆನ್ನೆಲುಬು ಎಂದ ಪಟ್ಟ ಕಟ್ಟಿ ಈಗ ರೈತನ ಬೆನ್ನೆಲಯಬು ಮುರಿಯುತ್ತಿದ್ದಾರೆ. ಇದು ದೇಶಕ್ಕೆ ಮಾರಕವಾಗಲಿದೆ. ಒಂದೊಂದು ಇಲಾಖೆ ಒಂದೊಂದು ಕಾನೂನು ಜಾರಿ ಮಾಡುತ್ತಿದೆ. ಕ್ರಿಮಿನಲ್ ಕೇಸು ಇದ್ದವರಿಗೆ ಗನ್ ಲೈಸನ್ಸ್ ನೀಡಿದ್ದಾರೆ. ಆದರೆ ಯಾವುದೇ ಕೇಸು ಇಲ್ಲದ ರೈತರಿಗೆ ಕಾಡು ಪ್ರಾಣಿಗಳಿಂದ ಕೃಷಿ ರಕ್ಷಣೆಗೆ ಲೈಸನ್ಸ್ ನೀಡುವುದಿಲ್ಲ ಎಂದು ಆರೋಪಿಸಿದರು.
೪೦೦ಕೆವಿ ವಿದ್ಯುತ್ ಹೋರಾಟ ಸಮಿತಿ ಅಧ್ಯಕ್ಷ ರಾಜೀವ್ ಗೌಡ ಮಾತನಾಡಿ, ೨೦೧೫ರಲ್ಲಿ ಪ್ರಾರಂಭಗೊಂಡಿರುವ ಉಡುಪಿ-ಕಾಸರಗೋಡು ೪೦೦ಕೆವಿ ವಿದ್ಯುತ್ ಲೈನ್‌ಗೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳನ್ನು ಬಹಳಷ್ಟು ಗುಪ್ತವಾಗಿಯೇ ನಡೆಸಿದ್ದಾರೆ. ಇದರಿಂದ ಸುಮಾರು ೯೦೦ ರೈತರ ಕೃಷಿ ಭೂಮಿ ನಾಶವಾಗಲಿದೆ. ೩೦೦ಕ್ಕೂ ಅಧಿಕ ಶೈಕ್ಷಣಿಕ ಕೇಂದ್ರ, ಧಾರ್ಮಿಕ ಕೇಂದ್ರಗಳಿಗೆ ಅಸ್ತತ್ವಕ್ಕೂ ಹೊಡೆದ ಬೀಳಲಿದೆ. ವಿದ್ಯುತ ಕಾಂತೀಯ ಅಲೆಗಳಿಂದ ಆರೋಗ್ಯಕ್ಕೂ ಮಾರಕವಾಗಲಿದೆ. ಇದ್ಯಾವುದರ ಮಾಹಿತಿ ನೀಡದೇ ಗುಪ್ತವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಕಂಪನಿಯವರು ಕೊಡುವ ಎಂಜಲಿನ ಆಸೆಗೆ ಅಧಿಕಾರಿಗಳು ಜನತೆ ಜೀವನದಲ್ಲಿ ಚೆಲ್ಲಾಡವಾಡುತ್ತಿದ್ದಾರೆ ಎಂದರು.
ಮುರುವ ಮಹಾಬಲ ಭಟ್ ಮಾತನಾಡಿ, ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಕಳೆದ ೬ ವರ್ಷಗಳಿಂದ ನಿರಂತರವಾಗಿ ಮನವಿ ಮಾಡುತ್ತಾ ಬರುತ್ತಿದ್ದರೂ ಯಾವುದೇ ಈಡೇರಿಸಿಲ್ಲಾ. ಒಂದು ಮರ ಕಡಿಯುವುದು ಅಪರಾಧವಾಗಿದ್ದರೂ ೪೦೦ ಕೆ.ವಿ ವಿದ್ಯುತ್ ಲೈನ್‌ಗಾಗಿ ಅರಣ್ಯ ಪ್ರದೇಶಲ್ಲಿಯೇ ಮರ ಕಡಿಯುತ್ತಿದ್ದಾರೆ. ಒಂದು ಮರ ಕಡಿದರೆ ಹತ್ತು ಸಸಿ ನೆಡಬೇಕು ಎಂಬ ನಿಯಮವಿದ್ದರೂ ಅವರು ಒಂದೂ ಸಸಿ ನಡೆವುದಿಲ್ಲ. ನಾವು ನೆಟ್ಟು ಬೆಳೆಸಿದ ಮರಗಳನ್ನು ಅವರು ಕಡಿಯುತ್ತಿದ್ದು ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡಿ ರೈತರನ್ನು ಬದುಕಲು ಬಿಡುವುದಿಲ್ಲ. ಎಲ್ಲಾ ಸರ್ವನಾಶವಾದ ಬಳಿಕ ಅಭಿವೃದ್ಧಿ ಯಾರಿಗೆ ಎಂದು ಅವರು ಪ್ರಶ್ನಿಸಿದರು.
ರಾಮಣ್ಣ ಶೆಟ್ಟಿ ಪಾಲಿಕೆ ಮಾತನಾಡಿ, ಸರಕಾರದ ಪೋಡಿ ಮುಕ್ತ ಗ್ರಾಮ ಯೋಜನೆ ಮಾಡಿದ್ದರೂ ಅದು ಈಗ ಆಗುತ್ತಿಲ್ಲ. ಆದರೂ ತಾಲೂಕು ಕಚೇರಿಯ ಏಜೆಂಟರರು ರೈತರಿಗೆ ಕರೆ ಮಾಡಿ ಪೋಡಿ ಮುಕ್ತದ ಸರ್ವೆ ನಡೆಸಿ ದಾಖಲೆ ಸರಿಪಡಿಸಲು ಅಧಿಕಾರಿಗಳು ಬರುವುದಾಗಿ ತಿಳಿಸುತ್ತಾರೆ. ಪೋಡಿ ಮುಕ್ತಕ್ಕೆ ಈಗಾಗಲೇ ಹಣ ಪಾವತಿಸಿದ್ದರೂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ಈಶ್ವರ ಭಟ್, ಶಿವಚಂದ್ರ ಈಶ್ವರಮಂಗಲ, ಶೇಖರ ರೈ ಕುಂಬ್ರ ಸಹಿತ ಹಲವು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿದರು.