ಮಂಗಳೂರು : ಅಶ್ಲೀಲ ವೀಡಿಯೊ ಇರುವುದಾಗಿ ಯುವತಿಯರನ್ನು ಬೆದರಿಸಿ ಹಣ ಸುಲಿಯುತ್ತಿದ್ದ ಕಾರ್ಕಳದ ಈದು ಗ್ರಾಮದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಈದು ಗ್ರಾಮದ ಸತೀಶ್ ಹೊಸ್ಮಾರು (36) ಎಂದು ಗುರುತಿಸಲಾಗಿದೆ.
ಈತ ಸೋಷಿಯಲ್ ಮೀಡಿಯಾದ ಮೂಲಕ ಯುವತಿಯರ ಮತ್ತು ಮಹಿಳೆಯರ ಮೊಬೈಲ್ ನಂಬರ್ ಸಂಪಾದಿಸಿ ಫೋನ್ ಮಾಡಿ ನಿಮ್ಮ ಅಶ್ಲೀಲ ವೀಡಿಯೊ ಇದೆ, ಹಣ ಕೊಡದಿದ್ದರೆ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತೇನೆ ಎಂದು ಬೆದರಿಸುತ್ತಿದ್ದ. ಈ ರೀತಿ ಹಲವು ಯುವತಿಯರಿಂದ ಹಣ ಸುಲಿಗೆ ಮಾಡಿದ್ದಾನೆ. ಮಂಗಳೂರಿನ ಓರ್ವ ಮಹಿಳೆ ನೀಡಿದ ದೂರಿನ ಪ್ರಕಾರ ಕದ್ರಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತಿತರ ಸೋಷಿಯಲ್ ಮೀಡಿಯಾಗಳಿಂದ ಮಹಿಳೆಯರ ಮೊಬೈಲ್ ನಂಬರ್‌ಗಳನ್ನು ಪಡೆದುಕೊಂಡು ವೀಡಿಯೊ ಇದೆ ಎಂದು ಬೆದರಿಕೆ ಕರೆಗಳನ್ನು ಮಾಡುತ್ತಿದ್ದ. ಮಂಗಳೂರಿನ ಮಹಿಳೆ ನೀಡಿದ ದೂರಿನಂತೆ ಅವನನ್ನು ಬಂಧಿಸಿ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಅನೇಕ ಯುವತಿಯರ ನಂಬರ್ ಸಿಕ್ಕಿದೆ. ಈತನ ವಿರುದ್ಧ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಜೈಲಿಗೂ ಹೋಗಿ ಬಂದಿದ್ದ. ಜೈಲಿನಿಂದ ಬಂದ ಬಳಿಕ ತನ್ನ ಹಳೇ ಚಾಳಿ ಮುಂದುವರಿಸಿದ್ದ.
ಮಹಿಳೆಯರನ್ನು ಬೆದರಿಸಿ ಹಣ ಸುಲಿಗೆ : ಆರೋಪಿ ಸೆರೆ
