ವೆಬ್ ಕಾಸ್ಟಿಂಗ್, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ
ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 20ರ ವರೆಗೆ ನಡೆಯಲಿದೆ. ಇಂದು ಕನ್ನಡ/ಅರೇಬಿಕ್ ಪರೀಕ್ಷೆ ನಡೆಯಲಿದೆ. ಈಗಾಗಲೇ ಶಿಕ್ಷಣ ಇಲಾಖೆ ಮತ್ತು ಪರೀಕ್ಷಾ ಮಂಡಳಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷೆ ಅಕ್ರಮ ತಡೆಗೆ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆಗೂ ವೆಬ್ ಕಾಸ್ಟಿಂಗ್ ಕಣ್ಗಾವಲು ಇರಲಿದೆ. ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪೈಕಿ 3,35,468 ಗಂಡು ಮಕ್ಕಳು, 3,78,389 ಹೆಣ್ಣು ಮಕ್ಕಳು ಹಾಗೂ ಐವರು ತೃತೀಯ ಲಿಂಗಿಗಳಿದ್ದಾರೆ.
ಒಟ್ಟು 1,171 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದರೊಂದಿಗೆ 2,342 ಸ್ಥಾನಿಕ ಜಾಗೃತ ದಳ, 76 ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರಗಳು ಹಾಗೂ 31,000 ಮೌಲ್ಯಮಾಪಕರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ. ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ, ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಇರಲಿದೆ.
ಪರೀಕ್ಷಾ ಕೇಂದ್ರದ ಸುತ್ತ ಇರುವ ಜೆರಾಕ್ಸ್, ಸೈಬರ್ ಸೆಂಟರ್, ಕಂಪ್ಯೂಟರ್ ಸೆಂಟರ್ ಮುಚ್ಚಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ರವಾನೆ ಮಾಡುವುದರಿಂದ ಹಿಡಿದು ಪರೀಕ್ಷಾ ಕೇಂದ್ರಕ್ಕೆ ತೆರಳುವವವರೆಗೂ ಕ್ಯಾಮೆರಾ ರೆಕಾರ್ಡ್. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ ಮುಂತಾದ ಕಠಿಣ ನಿಯಮಗಳಿವೆ.