ವಿಟ್ಲ : ಕಸಬಾ ಗ್ರಾಮ ವ್ಯಾಪ್ತಿಗೆ ಸೇರುವ ಶ್ರೀಗಣಪತಿ ಲಕ್ಷ್ಮೀನಾರಾಯಣ ಉಮಾಮಹೇಶ್ವರ ದೇವರ ಮಠದ ಜೀರ್ಣೋದ್ಧಾರದ ಸಂದರ್ಭದಲ್ಲಿ ಎರಡು ಶಿಲಾಫಲಕಗಳಲ್ಲಿ ಶಾಸನಗಳು ದೊರೆತಿದೆ
ಇದರ ಪ್ರಾಥಮಿಕ ಮಾಹಿತಿ ಯನ್ನು ಡಾ. ವೆಂಕಟೇಶ ಮಂಜುಳಗಿರಿ ಅವರಿಂದ ಪಡೆದುಕೊಂಡ ಕುಕ್ಕೆಸುಬ್ರಹ್ಮಣ್ಯದ ಶ್ರೀನಿಕೇತನ ವಸ್ತು ಸಂಗ್ರಹಾಲಯ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಜಿ.ವಿ. ಕಲ್ಲಾಪುರ ಅವರು ಈ ಅಪರೂಪದ ಶಾಸನ ಅಧ್ಯಯನ ಮಾಡಿದ್ದಾರೆ. ಶಾಸನವನ್ನು ಎರಡು ಕಣಶಿಲೆಯಲ್ಲಿ (ಗ್ರಾನೈಟ್) ಕೊರೆಯಲಾಗಿದ್ದು, ತುಳು ಲಿಪಿ ಮತ್ತು ಕನ್ನಡ ಭಾಷೆಯಲ್ಲಿದೆ. ಶಾಸನದ ಒಂದು ಫಲಕದಲ್ಲಿ 11 ಸಾಲುಗಳು ಮತ್ತು ಇನ್ನೊಂದು ಫಲಕದಲ್ಲಿ 4 ಸಾಲುಗಳಿವೆ.
ಸ್ವಸ್ತಿಶ್ರೀ ಎಂಬ ಶುಭ ಸೂಕ್ತದಿಂದ ಪ್ರಾರಂಭವಾಗುವ ಈ ಶಾಸನವನ್ನು ಶಾಲಿವಾಹನ ಶಕವರ್ಷ 1801ರ (ಸಾಮಾನ್ಯ ವರ್ಷ 1879) ಪ್ರಮಾಧಿ ಸಂವತ್ಸರದ ಉತ್ತರಾಯಣದ ಬಹುಳ ಬುಧವಾರದ ಕುಂಭ ಲಗ್ನದಲ್ಲಿ ಹಾಕಲಾಗಿದೆ. ಈ ಸಂದರ್ಭದಲ್ಲಿ ವಿಟ್ಲದ ಬಾಕ್ರಬೈಲಿನ ನೆತ್ರಕೆರೆಯ ಮಠದಲ್ಲಿ ಶ್ರೀಗಣಪತಿ ಲಕ್ಷ್ಮೀನಾರಾಯಣ ದೇವರನ್ನು ಪ್ರತಿಷ್ಠಾಪಿಸಿರುವುದು ಹಾಗೆಯೆ ಪ್ರತಿಷ್ಠಿತ ದೇವರ ನಿತ್ಯ ಸೇವೆಯ ವಿನಿಯೋಗಕ್ಕಾಗಿ ನಗದು ಸಹಿತ ದಾನವನ್ನು ಕುಕ್ಕಿಲದ ಪುಟ್ಟಣ ಭಟ್ಟರ ಮಗ ಈಶ್ವರ ಭಟ್ಟರು ನೀಡಿರುವುದು ಶಾಸನದಿಂದ ತಿಳಿದುಬರುತ್ತದೆ.
ಶೋಧನೆಯಲ್ಲಿ ಕುಕ್ಕೆಸುಬ್ರಹ್ಮಣ್ಯ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರದ ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇತಿಹಾಸ ಮತ್ತು ಪುರಾತತ್ತ ಸಂಶೋಧನಾರ್ಥಿ ಮಂಜುನಾಥ ನಂದಳಿಕೆ ಹಾಗೂ ದೇವಾಲಯದ ಆಡಳಿತ ಮಂಡಳಿಯ ಎನ್. ಶಂಕರನಾರಾಯಣ ಭಟ್ಟ, ಡಾ.ಎನ್. ತಿರುಮಲೇಶ್ವರ ಭಟ್ಟ, ಎನ್. ರವೀಶ, ಎನ್. ಮಹೇಶ, ಗಣೇಶ ಭಟ್, ಸುರೇಶ್ ಎನ್., ಶರ್ಮಿಳಾ, ಯು.ನಾರಾಯಣ ಭಟ್, ಮಂಜುಳಗಿರಿ ಈಶ್ವರ ಭಟ್ ಸಹಕರಿಸಿದ್ದರು. ತಿಳಿಸಲಾಗಿದೆ.