ಕಾಣಿಯೂರು : ಕಾಣಿಯೂರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಉಡುಪಿ, ಕಾಣಿಯೂರು ಶ್ರೀ ರಾಮತೀರ್ಥ ಮಠದ ಜಾತ್ರೆಯು ಫೆ. 28ರಂದು ಪ್ರಾರಂಭಗೊಂಡಿದೆ.
ಫೆ.28ರಂದು ಸಂಜೆ ಕಾಣಿಯೂರು ಮಠದಲ್ಲಿ ರಂಗಪೂಜೆ, ರಾತ್ರಿ ಉಳ್ಳಾಕುಲು ದೈವಗಳ ಭಂಡಾರ ತೆಗೆದು ಶ್ರೀ ಕಾಣಿಯೂರು ಉಳ್ಳಾಕುಲು ಮಾಡದಲ್ಲಿ ಧ್ವಜಾರೋಹಣ ನಡೆಯಿತು. ಈ ಸಂದರ್ಭದಲ್ಲಿ ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್ಯ, ಅರ್ಚಕ ಬಾಲಕೃಷ್ಣ ಅಸ್ರಣ್ಣ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳು, ಕೊಡುಕಟ್ಟಿನವರು, ಗ್ರಾಮಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು.
ಮಾ.1ರಂದು ಬೆಳಿಗ್ಗೆ ಕಾಣಿಯೂರು ಮಾಡದಲ್ಲಿ ಹಸಿರು ಕಾಣಿಕೆ ಸಮರ್ಪಣೆ, ಶ್ರೀ ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ, ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ಗಣಹೋಮ, ಮಹಾಪೂಜೆ ನಡೆಯಲಿದೆ.
ರಾತ್ರಿ ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿಯ ಆಶ್ರಯದಲ್ಲಿ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ನವರಸ ಕಲಾವಿದರು ಸುರತ್ಕಲ್ ಅಭಿನಯದ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಿರೆಲ್ ನಡೆಯಲಿದೆ. ಮಾ 2ರಂದು ಬೆಳಿಗ್ಗೆ ಮಲ್ಲಾರ ದೈವದ ನೇಮ, ದೈಯರ ದೈವದ ನೇಮ, ರಾತ್ರಿ ಬಯ್ಯದ ಬಲಿ ನಡೆಯಲಿದೆ. ಮಾ 3ರಂದು ಮಧ್ಯಾಹ್ನ ಎಲ್ಯಾರ ದೈವದ ನೇಮ, ಅನ್ನಸಂತರ್ಪಣೆ, ಮಾಣಿ ದೈವದ ನೇಮ, ಸಂಜೆ ನಾಯರ್ ದೈವದ ನೇಮ ಬಳಿಕ ಧ್ವಜಾವರೋಹಣ ನಡೆಯಲಿದೆ.
ಮಾ.4ರಂದು ಬೆಳಿಗ್ಗೆ ಕಾಣಿಯೂರು ಶ್ರೀ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ. ಅಪರಾಹ್ನ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ ನಡೆಯಲಿದೆ ಎಂದು ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್ಯ ತಿಳಿಸಿದ್ದಾರೆ.