ರಾಜ್ಯದಲ್ಲಿ ತೀವ್ರಗೊಂಡ ಹಕ್ಕಿಜ್ವರ : ಸಾವಿರಾರು ಕೋಳಿಗಳು ನಾಶ

ಮಾಂಸಾಹಾರ ಪ್ರಿಯರಿಗೆ ಆತಂಕ ತಂದೊಡ್ಡಿದ್ದ ಹಕ್ಕಿಜ್ವರ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರದ ಹಾವಳಿ ಕಾಣಿಸಿಕೊಂಡಿದ್ದು, ಸಾವಿರಾರು ಕೋಳಿಗಳನ್ನು ನಾಶ ಮಾಡಲಾಗಿದೆ. ಚಿಕ್ಕಬಳ್ಳಾಪುರ ದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ ರಾಯಚೂರು, ಬಳ್ಳಾರಿ ಜಿಲ್ಲೆಗಳಿಗೂ ಹರಡಿದೆ. ಬಳ್ಳಾರಿಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ ಬಳಿಯ ಸರ್ಕಾರಿ ಪಾಲ್ಟ್ರಿಫಾರ್ಮ್‌ನಲ್ಲಿ 2400 ಕೋಳಿಗಳು ಹಕ್ಕಿಜ್ವರದಿಂದ ಮೃತಪಟ್ಟಿವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್​ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಫೆಬ್ರವರಿ 21ರಿಂದ ಇಲ್ಲಿಯವರೆಗೆ 2400 ಕೋಳಿಗಳ ಮೃತಪಟ್ಟಿವೆ. ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಮಧ್ಯಪ್ರದೇಶದ ಭೂಪಾಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿ ಬಂದ ಬಳಿಕ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿತು. ಆಂಧ್ರಪ್ರದೇಶ, ತೆಲಂಗಾಣದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕುರೇಕುಪ್ಪ ಗ್ರಾಮದ ಸುತ್ತಲಿನ ಒಂದು ಕಿ.ಮೀ ವ್ಯಾಪ್ತಿಯನ್ನು ಅಪಾಯಕಾರಿ ವಲಯ ಎಂದು ಗುರುತು ಮಾಡಲಾಗಿದೆ. ತೋರಣಗಲ್ಲು, ಕುರೆಕುಪ್ಪ, ವಡ್ಡು, ತಾಳೂರು, ಬಸಾಪುರ, ದರೋಜಿ, ದೇವಲಾಪುರ ಗ್ರಾಮಗಳು ಸೇರಿದಂತೆ 10 ಕಿಮೀ ವ್ಯಾಪ್ತಿಯ ಪ್ರದೇಶವನ್ನ ಕಣ್ಣಗಾವಲು ವಲಯ ಎಂದು ಗುರುತು ಮಾಡಲಾಗಿದೆ.

































 
 

ಚಿಕ್ಕಬಳ್ಳಾಪುರ ತಾಲೂಕು ವರದಹಳ್ಳಿ ಗ್ರಾಮಕ್ಕೆ ಹಕ್ಕಿಜ್ವರ ವಕ್ಕರಿಸಿದ್ದು, ನಿತ್ಯ ಕೋಳಿಗಳು ಸಾಯುತ್ತಿವೆ. ಶುಕ್ರವಾರ ಒಂದೇ ದಿನ ಗ್ರಾಮದ ಮುನಿಕುಮಾರ್ ಎಂಬುವವರ ಮನೆಯಲ್ಲಿ 8 ಕೋಳಿಗಳು ಮೃತಪಟ್ಟಿವೆ. ಉಳಿದ ಕೋಳಿಗಳು ಕೂಡ ಸಾಯುವ ಸ್ಥಿತಿಯಲ್ಲಿವೆ. ಹಕ್ಕಿಜ್ವರಕ್ಕೆ ಕಡಿವಾಣ ಹಾಕಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಾಶಪಡಿಸಿದ್ದಾರೆ.
ರಾಯಚೂರಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನಪ್ಪುತ್ತಿರುವ ಹಿನ್ನೆಲೆಯಲ್ಲಿ ಕೋಳಿ ಉತ್ಪನ್ನಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ನಿತೀಶ್ ಕೆ. ಆದೇಶ ಹೊರಡಿಸಿದ್ದಾರೆ. ಪಶು ಸಂಗೋಪನಾ ಅಧಿಕಾರಿಗಳು ಕೋಳಿಫಾರ್ಮ್​ಗಳನ್ನು​ ಪರಿಶೀಲಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಫಾರ್ಮ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಕೋಳಿಫಾರ್ಮ್ ಸುತ್ತಮುತ್ತ ಸ್ಯಾನಿಟೈಸರ್​ ಸಿಂಪಡಣೆಗೆ ಸೂಚಿಸಿದ್ದಾರೆ. ಫಾರ್ಮ್ ಒಳಗಡೆ ಹೊಸ ವ್ಯಕ್ತಿ, ಕೋಳಿ ವಾಹನ ಪ್ರವೇಶಕ್ಕೆ ಅವಕಾಶ ನೀಡಬಾರದು. ಸ್ಯಾನಿಟೈಸರ್​ ಮಾಡಿದ ಬಳಿಕವೇ ಕೋಳಿಫಾರ್ಮ್ ಒಳಗೆ ಪ್ರವೇಶ ನೀಡಬೇಕೆಂದು ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top