ಕಡಬ : ವಿದ್ಯಾರ್ಥಿಗಳು ಮಹಾಶಿವರಾತ್ರಿಯಂದು ಹೂವಿನ ಚಟ್ಟಿ ಹಾಗೂ ಇನ್ನೀತರ ವಸ್ತುಗಳನ್ನು ಹಗಲು ವೇಳೆಯಲ್ಲಿ ಧ್ವಂಸ ಮಾಡಿರುವ ಘಟನೆ ಅಲಂಕಾರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ನಡೆದಿದೆ.
ಶಾಲೆಯ ಹೂವಿನ ಗಿಡ, ಹೂವಿನ ಚಟ್ಟಿ, ವಾಲಿಬಾಲ್ ನೆಟ್ ಹಾಳುಮಾಡಿದ್ದಲ್ಲದೇ, ಕಸದ ತೊಟ್ಟಿಯಲ್ಲಿದ್ದ ಕಸವನ್ನು ಚೆಲ್ಲಿ ಪಪ್ಪಾಯ ಗಿಡವನ್ನು ನಾಶ ಮಾಡಿದ್ದಾರೆ. ಶಾಲಾ ನೋಟಿಸ್ ಬೋರ್ಡ್ ಗೆ ಕೂಡ ಹಾನಿ ಮಾಡಲಾಗಿದ್ದು, ಶಾಲೆಯ ಬಾಳೆಗಿಡದಲ್ಲಿದ್ದ ಗೊನೆಯನ್ನು ಕಡಿದು ಶಾಲಾ ಆವರಣದಲ್ಲಿ ಹಾಕಿದಲ್ಲದೆ, ಶೌಚಾಲಯದ ಟ್ಯಾಪ್ ಸಹ ಮುರಿದು ಹಾಕಿದ್ದಾರೆ.
ಶಾಲಾ ಮುಖ್ಯಶಿಕ್ಷಕರು ಶಿವರಾತ್ರಿಯಂದು ರಜಾ ದಿನವಾದರೂ ಮಧ್ಯಾಹ್ನದ ತನಕ ಶಾಲೆಯಲ್ಲಿದ್ದು ಅನಂತರ ಕಾರ್ಯನಿಮಿತ್ತ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಕೃತ್ಯ ನಡೆದಿದೆ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಊರವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
























