800 ವರ್ಷ ಪುರಾತನ ದೈವಸ್ಥಾನದ ಆರಾಧನೆಗೆ ತಡೆಯೊಡ್ಡಿದ ಅಧಿಕಾರಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ
ಮಂಗಳೂರು : ಬಜ್ಪೆ ಸಮೀಪ ಇರುವ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ ಆರಾಧನೆಗೆ ತಡೆಯೊಡ್ಡಿರುವ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್) ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾಂತೇರಿ ಜುಮಾದಿ ದೈವಸ್ಥಾನ ಉಳಿಸಿ ಹೋರಾಟಕ್ಕೆ ತಯಾರಿ ನಡೆಯುತ್ತಿದೆ. ನಿನ್ನೆ ಮೊನ್ನೆ ಬಂದ ಎಂಎಸ್‌ಇಝಡ್ ಅಧಿಕಾರಿಗಳು 800 ವರ್ಷಕ್ಕೂ ಹಿಂದಿನ ದೈವದ ಆಚರಣೆ ಮತ್ತು ಆರಾಧನೆಗೆ ತಡೆಯೊಡ್ಡಿರುವುದು ಜನರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದೆ. ಕಂಪನಿಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಅಭಿಯಾನ ನಡೆಯುತ್ತಿದೆ. ವಿವಿಧ ಹ್ಯಾಷ್‌ಟ್ಯಾಗ್‌ಗಳನ್ನು ರಚಿಸಿ ಹೋರಾಟಕ್ಕೆ ಬೆಂಬಲ ಪಡೆಯಲಾಗುತ್ತಿದೆ.
ಏನಿದು ವಿವಾದ?
ಸುಮಾರು 800 ವರ್ಷಗಳ ಇತಿಹಾಸವಿರುವ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತಿನ ದೈವ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಅವಕಾಶವನ್ನು ನಿರಾಕರಿಸುವ ಮೂಲಕ ಮಂಗಳೂರು ಎಸ್‌ಇಝಡ್ ಕಂಪನಿ ತುಳುನಾಡಿನ ಆಸ್ಮಿತೆ, ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಿದೆ. ನೆಲ್ಲಿದಡಿ ಗುತ್ತು ಮನೆ ಪ್ರವೇಶಕ್ಕೆ ಹಾಗೂ ಕಾಂತೇರಿ ಜುಮಾದಿ ದೈವದ ನಿತ್ಯ ಆರಾಧನೆಗೆ ಸರಕಾರಿ ಸ್ವಾಮ್ಯದ ಎಂಎಸ್‌ಇಝಡ್ ಕಂಪನಿ ಅಧಿಕಾರಿಗಳು ತಡೆ ಒಡ್ಡಿದ್ದಾರೆ. ಕಾಂತಾರ ಸಿನಿಮಾ ರೀತಿಯಲ್ಲೇ ದೈವಾರಾಧನೆಗೆ ಅಧಿಕಾರಿಗಳಿಂದ ಅಡ್ಡಿ ಎಂಬ ಆರೋಪ ಕೇಳಿ ಬಂದಿದೆ.
ಈ ಪ್ರದೇಶವನ್ನು 2006ರಲ್ಲಿ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಿ ಇಡೀ ಊರಿಗೆ ಊರನ್ನೇ ಸರ್ಕಾರ ಒಕ್ಕಲೆಬ್ಬಿಸಿತ್ತು. ಸುಮಾರು 3 ಸಾವಿರ ಎಕರೆ ಭೂಮಿ ಎಂಎಸ್‌ಇಝಡ್ ವಶವಾದರೂ ಕಾಂತೇರಿ ಜುಮಾದಿ ದೈವಸ್ಥಾನ ಉಳಿದಿತ್ತು. ಅದೆಷ್ಟೋ ದೇವಸ್ಥಾನ, ದೈವಸ್ಥಾನ ,ಮಸೀದಿ, ಚರ್ಚ್ಗಳು ನೆಲಸಮವಾಗಿದ್ದವು. ಆದರೂ ದೈವದ ಕಾರ್ಣಿಕದ ಫಲವಾಗಿ ಕಾಂತೇರಿ ಜುಮಾದಿ ದೈವದ ಐತಿಹಾಸಿಕ ಸ್ಥಳ ಉಳಿದಿತ್ತು.
2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸಾವಿರಾರು ಎಕರೆ ಜನವಸತಿ ಜಾಗ ಸರ್ಕಾರದಿಂದ ಭೂ ಸ್ವಾಧೀನವಾಗಿತ್ತು. ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮವಾಗಿದ್ದವು. ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ದೇವಸ್ಥಾನ ಮುಟ್ಟಲಾಗಲಿಲ್ಲ. ನೆಲ್ಲಿದಡಿ ಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬಲಾತ್ಕಾರದಿಂದ ತನ್ನ ಹೆಸರಿಗೆ ಬರೆಸಿಕೊಂಡರೂ ದೈವಸ್ಥಾನ ಮಟ್ಟಲಾಗಲಿಲ್ಲ. ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಡುವುದಿಲ್ಲ ಎಂದು ದೈವ ನುಡಿದ ಕಾರಣ ಸಾವಿರಾರು ಎಕರೆ ಕೈಗಾರಿಕಾ ಪ್ರದೇಶದಲ್ಲಿ ಏಕಾಂಗಿಯಾಗಿ ಕಾಂತೇರಿ ಜುಮಾದಿ ದೈವದ ದೈವಸ್ಥಾನ ಈಗಲೂ ಇದೆ. 2016ರಲ್ಲಿ ಕಂಪನಿ ಮತ್ತೊಮ್ಮೆ ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಯತ್ನಿಸಿದರೂ ಆಗಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿ ದೈವಸ್ಥಾನವನ್ನು ಉಳಿಸಿಕೊಳ್ಳುವ ಭರವಸೆ ನೀಡಿದ್ದರು.
ಎಂಎಸ್‌ಇಝಡ್ ಕಂಪನಿ ಭೂ ಸ್ವಾಧೀನದ ವೇಳೆ ನೆಲ್ಲಿದಡಿ ಗುತ್ತಿನ 22 ಮನೆಗಳ ಸ್ಥಳಾಂತರ ಮಾಡಲು ಮನವೊಲಿಸುವ ಸಭೆಯಲ್ಲಿ ದೈವಕ್ಕೆ ನಿತ್ಯ ಹೂ ನೀರು, ಸಂಕ್ರಮಣ, ದೀಪಾವಳಿ, ಚೌತಿ, ಅಷ್ಟಮಿ, ಮಾರಿ ಉತ್ಸವ, ಬಂಡಿ ಉತ್ಸವ, ಚಾವಡಿ ನೇಮ, ಕುಟುಂಬದವರು ಮೃತಪಟ್ಟರೆ ಅದರ ಕಾರ್ಯಕ್ರಮ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿತ್ತು. 2016ರ ಡಿಸೆಂಬರ್‌ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಇದೇ ತೀರ್ಮಾನಕ್ಕೆ ಬರಲಾಗಿತ್ತು.
ಅದರಂತೆ ನೆಲ್ಲಿದಡಿ ಗುತ್ತು ಹಾಗೂ ಊರಿನವರು ಎಂಎಸ್‌ಇಝಡ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ದೈವಸ್ಥಾನಕ್ಕೆ ತೆರಳಿ ಸೇವಾ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರು.
ಆದರೆ ಫೆ.12ರಂದು ಸಂಕ್ರಮಣ ಸೇವೆ ಮಾಡಲು ತೆರಳಲು ಮನವಿ ಪತ್ರ ನೀಡುವ ವೇಳೆ ಇದು ಕೊನೆಯ ಅವಕಾಶವಾಗಿದ್ದು, ಮುಂದಿನ ದಿನಗಳಿಂದ ಆರಾಧನೆಗೆ ಅವಕಾಶ ಇರುವುದಿಲ್ಲ ಎಂದು ಎಂಎಸ್‌ಇಝಡ್ ಕಂಪನಿ ಅಧಿಕಾರಿಗಳು ಹೇಳಿದ್ದಾರೆ. ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನದಲ್ಲಿ ದೈವಕ್ಕೆ ಹೂವು ನೀರು ಇಡಲು ನಿರ್ಬಂಧ ಹೇರಲಾಗಿದೆ.
ಕಾರಣಿಕದ ದೈವ
ಕಾಂತೇರಿ ಜುಮಾದಿ ದೈವಸ್ಥಾನ ಬಹಳಷ್ಟು ಕಾರಣಿಕ ಶಕ್ತಿ ಹೊಂದಿದೆ. ಇಲ್ಲಿರುವ ಬಾವಿಯ ಸ್ಫಟಿಕ ಶುದ್ಧದಂತಿರುವ ತೀರ್ಥ ಕುಡಿದರೆ ಕ್ಷಣಾರ್ಧದಲ್ಲಿ ಮೈಗೆ ಏರಿದ ವಿಷ ಇಳಿಯುತ್ತದೆ ಎಂಬ ನಂಬಿಕೆ ಇದೆ. ಈ ಬಾವಿಯ ತೀರ್ಥ, ಇಲ್ಲಿನ ಒಂದು ಚಿಟಿಕೆ ಮಣ್ಣನ್ನು ಜುಮಾದಿ ದೈವದ ಹೆಸರು ಹೇಳಿ ಕೊಟ್ಟರೆ ಜೀವ ಉಳಿಯುತ್ತದೆ ಎಂಬ ನಂಬಿಕೆ ಇದೆ.
ಈ ದೈವಸ್ಥಾನದ ಎತ್ತರ ಮೀರಿ ಯಾರೂ ಸಹ ಕಟ್ಟಡ ಕಟ್ಟಬಾರದೆಂಬ ನಿಯಮವೂ ಇಲ್ಲಿದೆ. ನಿಯಮ ಮೀರಿ ಕಟ್ಟಡ ಕಟ್ಟಿದ ಫ್ಯಾಕ್ಟರಿಗಳಿಗೆ ಬೆಂಕಿ ಬಿದ್ದ ಉದಾಹರಣೆಯೂ ಇದೆ. ಇದೀಗ ಈ ದೈವಸ್ಥಾನಕ್ಕೆ ಹೋಗಲು ಪ್ರತ್ಯೇಕ ರಸ್ತೆಯ ವ್ಯವಸ್ಥೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಕಾಂತಾರ ಚಿತ್ರದಲ್ಲಿ ದೈವದ ಕೋಲದ ಹೊತ್ತಲ್ಲಿ ಅರಣ್ಯಾಧಿಕಾರಿಯೊಬ್ಬ ‘ನಿಮ್ಮ ಆಚರಣೆ ಆಡಂಬರಗಳನ್ನೆಲ್ಲಾ ಬಂದ್ ಮಾಡ್ತೀನಿ’ ಎಂದು ಹೇಳುವ ದೃಶ್ಯವಿದೆ. ಆದರೆ ಈ ರೀತಿಯ ಸನ್ನಿವೇಶವನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ಕೂಡ ನಡೆದಿದೆ. ಸರ್ಕಾರಿ ಸ್ವಾಮ್ಯದ ಕಂಪನಿ ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ ಭಾರಿ ವಿವಾದ ಸೃಷ್ಟಿಸಿದೆ. ಜನರ ಆಕ್ರೋಶ ಕಟ್ಟೆಯೊಡೆಯುವ ಮೊದಲು ಈ ವಿವಾದವನ್ನು ಪರಿಹರಿಸಿ ದೈವದ ಕೈಂಕರ್ಯಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು, ದೈವಸ್ಥಾನಕ್ಕೆ ಹೋಗಲು ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.