ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ ಮಹಾರುದ್ರಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು.
ಮಹಾಶಿವರಾತ್ರಿ ಉತ್ಸವದ ವಿಶೇಷವಾಗಿ ಬೆಳಗ್ಗೆ 7:30ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, 9 ಗಂಟೆಗೆ ಶತರುದ್ರಾಭಿಷೇಕ ನಡೆಯಿತು. ವಿಶೇಷವಾಗಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಮೂರ್ತಿಗೆ ಭಕ್ತಾದಿಗಳಿಂದ ಬಿಲ್ವಾರ್ಚನೆ ಸೇವೆ ತಡ ರಾತ್ರಿ ವರೆಗೂ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.

ಸಂಜೆ ಶ್ರೀ ದೇವಸ್ಥಾನಕ್ಕೆ ಭಕ್ತಾದಿಗಳ ದಂಡೇ ಆಗಮಿಸಿದ್ದು, ದೇವಸ್ಥಾನದ ಒಳಾಂಗಣ ಭಕ್ತಾದಿಗಳಿಂದ ಕಿಕ್ಕಿರಿದು ತುಂಬಿತ್ತು. ಸಂಜೆ 6 ಗಂಟೆಗೆ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ಶ್ರೀ ದೇವರ ಬಲಿ ಉತ್ಸವ ನಡೆದು ದೇವಸ್ಥಾನದ ಬಲಭಾಗದ ಕಟ್ಟೆ ಅಂದರೆ ಕಂಡನಾಯಕನ ಕಟ್ಟೆಯ ಎದುರು ಸಂಗೀತ, ನೃತ್ಯ ಮುಂತಾದ ವಿವಿಧ ಪ್ರಾಕಾರಗಳನ್ನೊಳಗೊಂಡು ಶಿವನಿಗೆ ಪ್ರಿಯವಾದ ಅಷ್ಟಾವಧಾನ ಸೇವೆ ನಡೆಯಿತು.

ರಾತ್ರಿ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದ ಬಳಿಕ ಚಂದ್ರಮಂಡಲ ರಥ ಉತ್ಸವ, ಬಳಿಕ ವೈಭವದ ತೆಪ್ಪೋತ್ಸವ ಭಕ್ತಾದಿಗಳ ಜಯಘೋಷದೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ ಕುಮಾರ್ ಸುವರ್ಣ, ಮಹಾಬಲ ರೈ ಒಳತ್ತಡ್ಕ, ಪಿ.ವಿ.ದಿನೇಶ್ ಕುಲಾಲ್, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.