ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ – ರಾಜಕೀಯದಲ್ಲಿ ಸಂಚಲನ
ಬೆಂಗಳೂರು: ಕೊಯಮತ್ತೂರಿನ ಇಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿರುವುದು ರಾಜಕೀಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ನಲ್ಲಿ ಈ ನಡೆಗೆ ತೀವ್ರ ಅಪಸ್ವರ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಹಾಕುತ್ತಾರೆ ಎಂದು ಡಿಕೆಶಿ ಹೇಳಿಕೆ ಬೆನ್ನಲ್ಲೇ ಎಐಸಿಸಿ ಕಾರ್ಯದರ್ಶಿ ಕೇರಳದ ಮಾಜಿ ಉಸ್ತುವಾರಿ ಪಿ.ವಿ.ಮೋಹನ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಹಾಗೂ ರಾಹುಲ್ ಗಾಂಧಿ ತತ್ವಕ್ಕೆ ವಿರುದ್ಧವಾದ ನಡೆ ಇದು ಎಂದು ಡಿ.ಕೆ.ಶಿವಕುಮಾರ್ ನಡೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ನಾಯಕ ರಾಹುಲ್ ಗಾಂಧೀಜಿ ಅವರನ್ನು ಅಪಹಾಸ್ಯ ಮಾಡುವ, ಯಾವಾಗಲೂ ಆರ್‌ಎಸ್‌ಎಸ್‌ನ ನಿರೂಪಣೆಗಳೊಂದಿಗೆ ಹೊಂದಿಕೆಯಾಗುವ ವ್ಯಕ್ತಿಗೆ ಜಾತ್ಯತೀತ ಪಕ್ಷದ ಅಧ್ಯಕ್ಷನಾಗಿ ಮತ್ತು ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ ಸಾರ್ವಜನಿಕವಾಗಿ ಧನ್ಯವಾದ ಹೇಳುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ.
ಪಕ್ಷದ ಪ್ರಗತಿ ಮತ್ತು ಬೆಳವಣಿಗೆ ಜೊತೆ ರಾಜಿಯಾಗಬಾರದು. ದೃಢನಿಶ್ಚಯಕ್ಕೆ ಬದ್ಧತೆ ಬಹಳ ಮುಖ್ಯ, ಇದನ್ನು ನಿರ್ಲಕ್ಷಿಸಿದರೆ ಪಕ್ಷದ ಸೈದ್ಧಾಂತಿಕ ನೆಲೆ ದುರ್ಬಲಗೊಳ್ಳಬಹುದು. ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಹಿನ್ನೆಲೆಯ ಹಲವಾರು ವ್ಯಕ್ತಿಗಳಿಗೆ ಆಹ್ವಾನ ನೀಡಿರುವುದು ಆತಂಕದ ವಿಚಾರ. ಈ ಕಾರ್ಯಕ್ರಮಕ್ಕೆ ಅಮಿತ್ ಶಾ ಅವರನ್ನೂ ಆಹ್ವಾನಿಸಲಾಗಿದೆ. ನಮ್ಮ ಪಕ್ಷದ ಅಧ್ಯಕ್ಷರು ವೇದಿಕೆಯನ್ನು ಹಂಚಿಕೊಂಡು ಅಮಿತ್ ಶಾ ಅವರೊಂದಿಗೆ ಇಡೀ ರಾತ್ರಿ ಕಳೆಯುತ್ತಿದ್ದಾರೆ ಎನ್ನುವುನ್ನು ಗ್ರಹಿಸಲು ಕಷ್ಟವಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಶಾ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಆಚರಣೆ ಬುಧವಾರ ಸಂಜೆ 6 ಗಂಟೆಯಿಂದ ಆರಂಭವಾಗಿ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ನಡೆದಿದೆ. ಸಾವಿರಾರು ಜನರು ಭಾಗಿಯಾಗಿರುವ ಕಾರ್ಯಕ್ರಮದಲ್ಲಿ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಮಧ್ಯದಲ್ಲಿ ಕುಳಿತಿದ್ದರೆ ಬಲಗಡೆ ಡಿ.ಕೆ ಶಿವಕುಮಾರ್ ಮತ್ತು ಎಡಗಡೆ ಅಮಿತ್ ಶಾ ಕುಳಿತಿದ್ದಾರೆ. ಪ್ರತಿ ವರ್ಷ ಇಶಾ ಫೌಂಡೇಷನ್ ವತಿಯಿಂದ ಶಿವರಾತ್ರಿ ಜಾಗರಣೆ ನಡೆಯುತ್ತದೆ. ಅಹೋರಾತ್ರಿ ನೃತ್ಯ, ಸಂಗೀತ ಕಾರ್ಯಕ್ರಮ ಆಯೋಜನೆ ಆಗಿರುತ್ತದೆ.
ಈ ಕಾರ್ಯಕ್ರಮ ಈಗ ಕರ್ನಾಟಕದ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿರುವುದು ವಿಶೇಷ. ಮುಖ್ಯಮಂತ್ರಿ ಹುದ್ದೆ ಸಿಗದೆ ಹತಾಶೆಯಲ್ಲಿರುವ ಡಿ.ಕೆ ಶಿವಕುಮಾರ್ ಕೆಲವೊಂದು ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ಗೆ ಸಡ್ಡು ಹೊಡೆಯುವ ರೀತಿ ವರ್ತಿಸುತ್ತಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಕುಂಭಮೇಳಕ್ಕೆ ಪತ್ನಿ ಸಮೇತ ಹೋಗಿ ಪುಣ್ಯಸ್ನಾನ ಮಾಡಿ ಬಂದಿದ್ದರು. ಕುಂಭಮೇಳವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಟೀಕಿಸಿದ ಬೆನ್ನಿಗೇ ಶಿವಕುಮಾರ್ ಕುಂಭಮೇಳಕ್ಕೆ ಹೋದದ್ದು ಹುಬ್ಬೇರಿಸುವಂತೆ ಮಾಡಿತ್ತು. ಇದರ ಬೆನ್ನಿಗೆ ನಾನು ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿಯೇ ಸಾಯುತ್ತೇನೆ ಎಂದು ಡಿಕೆಶಿ ನೀಡಿದ ಹೇಳಿಕೆಗೆ ನಾನಾ ರೀತಿಯ ವ್ಯಾಖ್ಯಾನಗಳನ್ನು ಮಾಡಲಾಗಿತ್ತು. ಡಿಕೆಶಿ ಬಲಪಂಥದತ್ತ ವಾಲುತ್ತಿದ್ದಾರೆ ಎಂಬ ಸಂದೇಶವೊಂದು ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಶಿವರಾತ್ರಿ ಜಾಗರಣೆಯಲ್ಲಿ ಅಮಿತ್ ಶಾ ಜೊತೆಗೆ ಭಾಗವಹಿಸಿರುವುದಕ್ಕೆ ನಾನಾ ಅರ್ಥಗಳನ್ನು ಕಲ್ಪಿಸಲಾಗಿದೆ.