ಇದುವರೆಗೆ ಸುಮಾರು 64 ಕೋಟಿ ಜನರಿಂದ ಪುಣ್ಯಸ್ನಾನ
ಪ್ರಯಾಗರಾಜ್: ಮಹಾಶಿವರಾತ್ರಿ ಪವಿತ್ರ ದಿನವಾದ ಇಂದು ಮಹಾಕುಂಭಮೇಳದಲ್ಲಿ ಕೊನೆಯ ಪುಣ್ಯಸ್ನಾನ ನಡೆಯಲಿದ್ದು, ಇದರೊಂದಿಗೆ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾಗಲಿದೆ. ಫೆಬ್ರವರಿ 25ರಂದು ರಾತ್ರಿ 8 ಗಂಟೆಯವರೆಗೆ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 1.24 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದರು. ಇದರೊಂದಿಗೆ ಜನವರಿ 13ರಿಂದ ಮಹಾಕುಂಭದಲ್ಲಿ ಸ್ನಾನ ಮಾಡಿದ ಒಟ್ಟು ಭಕ್ತರ ಸಂಖ್ಯೆ 64 ಕೋಟಿ ಮೀರಿದೆ.
ಇಂದು ನಡೆಯಲಿರುವ ಮಹಾಶಿವರಾತ್ರಿಯ ಅಂತಿಮ ಪುಣ್ಯ ಸ್ನಾನಕ್ಕಾಗಿ ಭಾರಿ ತಯಾರಿಯನ್ನು ಮಾಡಲಾಗಿದೆ. ಕುಂಭಮೇಳ ನಡೆಯುತ್ತಿರುವ ಇಡೀ ಪ್ರದೇಶವನ್ನು ವಾಹನ ಸಂಚಾರ ಮುಕ್ತ ಪ್ರದೇಶವೆಂದು ಘೋಷಿಸಲಾಗಿದ್ದು, ಜನರಿಗೆ ವಾಹನ ಎಲ್ಲಿ ನಿಲ್ಲುತ್ತದೋ ಅಲ್ಲೇ ಸ್ನಾನ ಮಾಡಿ ಹೋಗುವಂತೆ ಸೂಚಿಸಲಾಗಿದೆ.

ಇಂದು ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ಜನ ಪ್ರಯಾಗ್‌ರಾಜ್‌ಗೆ ಬರುವ ನಿರೀಕ್ಷೆಯಿದೆ. ಹೀಗಾಗಿ ನೂಕುನುಗ್ಗಲು ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಜ.13ರಿಂದ ಆರಂಬಗೊಂಡ ಮಹಾಕುಂಭಮೇಳ ಒಂದು ಕಾಲ್ತುಳಿತ ದುರ್ಘಟನೆ, ಒಂದೆರಡು ಬೆಂಕಿ ಅವಘಡಗಳನ್ನು ಹೊರತುಪಡಿಸಿದರೆ ಸಾಂಗವಾಗಿ ಸಾಗಿದೆ. ಆರಂಭದಲ್ಲಿ 45 ಕೋಟಿ ಜನ ಕುಂಭಮೇಳಕ್ಕೆ ಆಗಮಿಸುವ ನಿರೀಕ್ಷೆ ಇತ್ತಾದರೂ ದೇಶ ವಿದೇಶಗಳಿಂದ ಜನರು ಆಗಮಿಸಿದ್ದು, ಈಗಾಗಲೇ 64 ಕೋಟಿ ಜನ ಮಿಂದೆದ್ದಿದ್ದಾರೆ. ಶಿವರಾತ್ರಿಯಂದು 1 ಕೋಟಿ ಜನ ಬಂದರೆ ಒಟ್ಟಾರೆ ಸುಮಾರು 65 ಕೋಟಿ ಜನ ಮಹಾಕುಂಭಮೇಳದಲ್ಲಿ ಭಾಗವಹಿಸಿದಂತಾಗುತ್ತದೆ. ಇದು ಜಗತ್ತಿನ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಸೇರಿದ ಅತಿಹೆಚ್ಚಿನ ಜನಸಂಖ್ಯೆ ಎಂಬ ದಾಖಲೆಗೆ ಪಾತ್ರವಾಗಲಿದೆ.
ಜ.29ರ ಮೌನಿ ಅಮವಾಸ್ಯೆಯ ಶಾಹಿ ಸ್ನಾನದಂದು ಮುಂಜಾನೆ ಹೊತ್ತು ಕಾಲ್ತುಳಿತ ಸಂಭವಿಸಿ 30 ಜನ ಸಾವಿಗೀಡಾಗಿದ್ದರು. ಮಹಾಕುಂಭಮೇಳದಲ್ಲಿ 3 ಅಮೃತ ಸ್ನಾನ ಮತ್ತು 3 ಪುಣ್ಯಸ್ನಾನ ದಿನಗಳಿದ್ದವು. ಕಾಲ್ತುಳಿತದ ಬಳಿಕ ನಿಯಮಗಳನ್ನು ಇನ್ನಷ್ಟು ಬಿಗುಗೊಳಿಸಿ ಯಾವುದೇ ಅವಧಡಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಹಾಕುಂಭಮೇಳಕ್ಕಾಗಿ ಉತ್ತರ ಪ್ರದೇಶ ಸರಕಾರ ಕೇಂದ್ರದ ಜೊತೆ ಸೇರಿ ಮಾಡಿದ ಅದ್ಭುತ ತಯಾರಿಗೆ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ನಿತ್ಯ ಕೋಟಿಗಳ ಲೆಕ್ಕದಲ್ಲಿ ಬರುವ ಜನರಿಗೆ ಯಾವುದೇ ಅನನುಕೂಲವಾಗದಂತೆ ಇಡೀ ಧಾರ್ಮಿಕ ಕಾರ್ಯವನ್ನು ನಿಭಾಯಿಸಲಾಗಿದೆ. ವಾಹನ ಮತ್ತು ಜನ ದಟ್ಟಣೆ ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಜನರಿಗೆ ಆಗಿಲ್ಲ. ಮಹಾಕುಂಭಮೇಳದಿಂದಾಗಿ ಅಯೋಧ್ಯೆ, ಕಾಶಿ ಸೇರಿದಂತೆ ಅನೇಕ ಪ್ರಮುಖ ದೇವಳಗಳಲ್ಲೂ ಭಾರಿ ಭಕ್ತಸಂದಣಿಯಿತ್ತು.
