ಆರೋಪಿಗಳ ಖರ್ಚಿನಲ್ಲೇ ಗುಜರಾತ್‌ಗೆ ಹೋಗಿ ಮೋಜುಮಸ್ತಿ ಮಾಡಿದ ಫೋಟೊ ಬಹಿರಂಗ
ಮಂಗಳೂರು : ಅಮೆಜಾನ್ ಆನ್‌ಲೈನ್ ಕಂಪನಿಗೆ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಇಬ್ಬರು ಸೈಬರ್ ವಂಚಕರಿಂದಲೇ ಮಂಗಳೂರು ಪೊಲೀಸರು ಕಾನೂನು ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ ಜಾಗೃತಿಯ ಪಾಠ ಮಾಡಿಸಿ ಯಡವಟ್ಟು ಮಾಡಿಕೊಂಡಿರುವುದು ಬಹಿರಂಗವಾಗಿದೆ. ಇಷ್ಟು ಮಾತ್ರವಲ್ಲದೆ ಈ ಆರೋಪಿಗಳ ಖರ್ಚಿನಲ್ಲಿ ಪೊಲೀಸರು ತಿರುಗಾಡಿ ಮೋಜು ಮಸ್ತಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಕೂಡ ಬಹಿರಂಗವಾಗಿ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ.
ಮಂಗಳೂರಿನ ಉರ್ವ ಠಾಣೆಯ ಪೊಲೀಸರ ವಿರುದ್ಧ ಇಂಥದ್ದೊಂದು ಗಂಭೀರ ಆರೋಪ ಕೇಳಿಬಂದಿದೆ. ಆರೋಪಿಗಳ ಜತೆ ಅವರು ತೆಗೆದ ಸೆಲ್ಫಿ, ಫೋಟೊಗಳು ಬಹಿರಂಗವಾಗಿವೆ.
ರಾಜಸ್ಥಾನ ಮೂಲದ ರಾಜ್‌ಕುಮಾರ್ ಮೀನಾ (23) ಮತ್ತು ಸುಭಾಸ್ ಗುರ್ಜರ್ (27) ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೆ ವಂಚಿಸಿದ್ದರು. ಅಮೆಜಾನ್ ಕಂಪನಿಯ ನಿಯಮಗಳನ್ನೆ ಬಂಡವಾಳ ಮಾಡಿಕೊಂಡು 30 ಕೋಟಿ ರೂ. ವಂಚಿಸಿದ್ದರು. ಆರೋಪಿಗಳನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಹೀಗಾಗಿ ಸೇಲಂ ಜೈಲ್‌ನಿಂದ ಬಾಡಿ ವಾರೆಂಟ್ ಮೇಲೆ ಉರ್ವ ಪೊಲೀಸರು ಇಬ್ಬರನ್ನು ನಗರಕ್ಕೆ ಕರೆದುಕೊಂಡು ಬಂದಿದ್ದರು. ಆ ಬಳಿಕ ಬಂಧಿತ ಆರೋಪಿಗಳ ಖರ್ಚಿನಲ್ಲೇ ತನಿಖೆಯ ನೆಪದಲ್ಲಿ ಗುಜರಾತ್‌ಗೆ ನಾಲ್ವರು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಯೊಬ್ಬನ ಜತೆ ಸಲುಗೆ ಬೆಳೆಸಿ ನಾನಾ ಕಡೆ ಸುತ್ತಾಡಿದ್ದಾರೆ. ಗುಜರಾತ್ನ ಹಲವೆಡೆ ಸುತ್ತಾಡಿ ಪೊಲೀಸರೊಂದಿಗೆ ಆರೋಪಿ ಸೆಲ್ಫಿಯನ್ನೂ ತೆಗೆದುಕೊಂಡಿದ್ದಾನೆ.
ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಕಾನೂನು ಕಾಲೇಜೊಂದರ 30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಾಗೃತಿ ಪಾಠ ಮಾಡಿಸಲಾಗಿತ್ತು. ಠಾಣೆಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲೇ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಆರೋಪಿ ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ ಬಗ್ಗೆ ಮಾಹಿತಿ ನೀಡಿದ್ದ.
ಬಂಧಿತ ಆರೋಪಿಗಳು ಆನ್‌ಲೈನ್ ಮಾರುಕಟ್ಟೆಯಿಂದ ನಾನಾ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಖರೀದಿಸಿ ಮೋಸ ಮಾಡಿದ್ದರು. ಹಣ ಕೊಟ್ಟಂತೆ ನಟಿಸಿ ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಆರೋಪಿಗಳ ವಿರುದ್ಧ ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಅಧಿಕ ರಾಜ್ಯಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಮಹೀಂದ್ರ ಲಾಜಿಸ್ಟಿಕ್‌ನ ವಿಜಿಲೆನ್ಸ್ ಅಧಿಕಾರಿಯೊಬ್ಬರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಮಂಗಳೂರಿನ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ರಾಜಕುಮಾರ್ ಮೀನಾನನ್ನು ತಮಿಳುನಾಡಿನ ಸೇಲಂ ಪೊಲೀಸರು ಸೇಲಂನಲ್ಲಿ ಹಾಗೂ ರಾಜಸ್ಥಾನದಲ್ಲಿ ಸುಭಾಸ್ ಗುರ್ಜರ್ನನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿ ವೇಳೆ ಆರೋಪಿಗೆ ರಾಜಾತಿಥ್ಯ ನೀಡಿರುವ ಆರೋಪವೂ ಉರ್ವ ಪೊಲೀಸರ ವಿರುದ್ಧ ಕೇಳಿಬಂದಿದೆ. ಪೊಲೀಸರ ಯಡವಟ್ಟಿನ ಕೆಲಸಗಳ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.