ಪುತ್ತೂರು: ಈ ಬಾರಿ ಗ್ರಾಪಂಗಳಲ್ಲಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸುವುದನ್ನು ಸರ್ಕಾರ ರದ್ದು ಮಾಡಿದೆ. ಈ ಹಿಂದೆ ತೆಗೆಯಲಾದ ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ತಾಲೂಕಿನ ಒಟ್ಟು 56 ಗ್ರಾಪಂಚಾಯತ್ ಗಳಿಗೆ ಕುಡಿಯುವ ನೀಡಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಅವರು ಸೋಮವಾರ ಸಂಜೆ ಪುತ್ತೂರು ತಾಪಂ ಸಭಾಂಗಣದಲ್ಲಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ವಿಧಾನಸಭಾ ವ್ಯಾಪ್ತಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮುಂದಿನ ಎಪ್ರಿಲ್ ಗೆ ಸಿದ್ದ :
ಬಹುಗ್ರಾಮ ಕುಡಿಯುವ ನೀರು ಯೋಜನೆ ಮುಂದಿನ ಎಪ್ರಿಲ್ ತಿಂಗಳ ಅಂತ್ಯದೊಳಗೆ ವ್ಯವಸ್ಥೆಯಾಗಬೇಕು. ಕುಡಿಯುವ ನೀರು ಒದಗಿಸುವಲ್ಲಿ ಈಗಾಗಲೇ ಗ್ರಾಪಂ ಗಳಲ್ಲಿರುವ ಪೈಪ್ ಲೈನ್ ಗಳನ್ನು ವ್ಯವಸ್ಥಿತಗೊಳಿಸುವ ಕೆಲಸ ನಡೆಯಬೇಕು. ಈ ಬಾರಿ ತಾಲೂಕಿನ ಕೆಲ ಗ್ರಾಪಂ ಗಳಲ್ಲಿ ನೀರಿನ ಸಮಸ್ಯೆ ಫೆಬ್ರವರಿ ತಿಂಗಳಲ್ಲಿಯೇ ಕಂಡುಬಂದಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಮುಂದಿನ ತಿಂಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಅದಕ್ಕೆ ಬೇಕಾದ ತಯಾರಿಗಳನ್ನು ಈಗಲೇ ಮಾಡಿಕೊಳ್ಳಿ. ಪರಿಹರಿಸಲಾರದ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ, ಯಾವುದೇ ವಿಚಾರವನ್ನೂ ನಿರ್ಲಕ್ಷರಿಯ ಮಾಡಿದರೆ ಈ ಸಮಸ್ಯೆಗೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು.
ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು ಸ್ವಾಗತಿಸಿ ವಂದಿಸಿದರು.