ಗಡಿ ವಿವಾದವಾಗಿ ಬದಲಾದ ಕಂಡಕ್ಟರ್ ಮೇಲಿನ ಹಲ್ಲೆ ಘಟನೆ
ಬೆಳಗಾವಿ: ಮರಾಠಿ ಗೊತ್ತಿಲ್ಲ ಕನ್ನಡದಲ್ಲಿ ಮಾತನಾಡು ಎಂದ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಬೆಳಗಾವಿಯಲ್ಲಿ ಹಲ್ಲೆ ನಡೆಸಿದ ವಿಚಾರ ಈಗ ಎರಡು ರಾಜ್ಯಗಳ ನಡುವೆ ಗಡಿ ಉದ್ವಿಗ್ನತೆ ಸೃಷ್ಟಿಗೆ ಕಾರಣವಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್‌ಗಳನ್ನು ಅಲ್ಲಿನ ಮರಾಠಿ ಪುಂಡರು ಟಾರ್ಗೆಟ್ ಮಾಡುತ್ತಿದ್ದು, ಉದ್ಧವ್ ಠಾಕ್ರೆ ಬಣದ ಶಿವಸೇನೆ ಪುಂಡರು ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದು ಹಾನಿ ಎಸಗಿದ್ದಾರೆ.
ಪುಣೆಯ ಸ್ವಾರ್‌ಗೇಟ್ ಬಳಿ ಪುಂಡಾಟಿಕೆ ಮಾಡಿರುವ ವೀಡಿಯೊ ವೈರಲ್ ಆಗಿದೆ. ಫೆ.22ರಂದು ರಾತ್ರಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಗೂಂಡಾ ವರ್ತನೆ ತೋರಿದ್ದಾರೆ. ನಡುರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಮಸಿ ಬಳಿದಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕಕ್ಕೆ ಸೇರಿದ ಬಸ್‌ಗಳಿಗೆ ಮಸಿ ಬಳಿಯಲಾಗಿದೆ. ಬಸ್ ಮೇಲಿದ್ದ ಕನ್ನಡ ಅಕ್ಷರಗಳಿಗೆ ಮಸಿ ಬಳಿಯಲಾಗಿದೆ. ಮರಾಠಿ ಬರುತ್ತಾ ಎಂದು ಕೇಳಿ ಬರಲ್ಲ ಎಂದಿದ್ದಕ್ಕೆ ಬಸ್‌ನ ಬೋರ್ಡ್ ಒಡೆದು ಚಾಲಕನಿಗೆ ಧಮ್ಕಿ ಹಾಕಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರಿಗೆ ತೊಂದರೆ ಕೊಟ್ಟರೆ ಹೀಗೆ ಒಡೆದು ಹಾಕ್ತೀವಿ ಎಂದು ಬೆದರಿಕೆ ಒಡ್ಡಿದ್ದಾರೆ.
ಕಂಡಕ್ಟರ್ ಮೇಲೆ ಹಲ್ಲೆ ನಡೆದ ಬಳಿಕ ಕರ್ನಾಟಕಕ್ಕೆ ಬರುತ್ತಿದ್ದ ಮಹಾರಾಷ್ಟ್ರದ ಬಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಆದರೆ ಕರ್ನಾಟಕದ ಬಸ್‌ಗಳು ಮಹಾರಾಷ್ಟ್ರಕ್ಕೆ ಹೋಗುತ್ತಿವೆ.