ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿದು ನಗೆಪಾಟಲಾದ ನಾಗಸಾಧು
ಹೊಸದಿಲ್ಲಿ : ಚಾಂಪಿಯನ್ಸ್ ಟ್ರೋಫಿಯಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ಥಾನ ರಣರೋಚಕ ಕದನದಲ್ಲಿ ಭಾರತ ಗೆದ್ದ ಬಳಿಕ ಕುಂಭಮೇಳದ ಮೂಲಕ ಪ್ರಸಿದ್ಧಿಗೆ ಬಂದಿರುವ ಐಐಟಿ ಬಾಬಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಐಐಟಿ ಪದವೀಧರನಾಗಿಯೂ ನಾಗಾಸಾಧು ಆದ ಕಾರಣಕ್ಕೆ ಈ ಐಐಟಿ ಬಾಬಾ ಭಾರಿ ಪ್ರಚಾರ ಪಡೆದುಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಬಹಳ ಸೆನ್ಸೇಷನ್ ಉಂಟು ಮಾಡಿದ್ದರು. ಆದರೆ ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿದು ಈಗ ಈ ಬಾಬಾ ನಗೆಪಾಟಲಾಗಿದ್ದಾರೆ.
ಭಾರತ ಹಾಗೂ ಪಾಕಿಸ್ಥಾನ ನಡುವಿನ ಈ ಹೈವೋಲ್ಟೇಜ್ ಕದನ ನಡೆಯುವುದಕ್ಕೆ ಕೆಲವು ದಿನಗಳ ಮುನ್ನ ಐಐಟಿ ಬಾಬಾ ಖಾಸಗಿ ಯುಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ಉಭಯ ತಂಡಗಳ ನಡುವಿನ ಕದನದ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದರು. ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಲಿದೆ ಎಂದು ಅವರು ಹೇಳಿದ್ದರು. ಇದಲ್ಲದೆ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಫಲರಾಗುತ್ತಾರೆ ಎಂತಲೂ ಬಾಬಾ ಹೇಳಿದ್ದರು.
ಆದರೆ ಬಾಬಾ ಹೇಳಿದ್ದ ಈ ಎರಡು ಭವಿಷ್ಯ ಇದೀಗ ಪೂರ್ತಿ ಸುಳ್ಳಾಗಿದೆ. ಬಾಬಾ ಭವಿಷ್ಯಕ್ಕೆ ತದ್ವಿರುದ್ಧವಾಗಿ ಟೀಂ ಇಂಡಿಯಾ ಪಾಕಿಸ್ಥಾನವನ್ನು 6 ವಿಕೆಟ್ಗಳಿಂದ ಬಗ್ಗುಬಡಿದಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಹೀಗಾಗಿ ಪಂದ್ಯಕ್ಕೂ ಮುನ್ನ ಭಾರತದ ವಿರುದ್ಧ ಪಂದ್ಯದ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣರಾಗಿದ್ದ ಈ ಐಐಟಿ ಬಾಬಾರನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ 241 ರನ್ ಗಳಿಸಿತ್ತು. ಪಾಕಿಸ್ಥಾನ ಪರ ಸೌದ್ ಶಕೀಲ್ ಅತಿ ಹೆಚ್ಚು 62 ರನ್ ಗಳಿಸಿದರು. ಈ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 42.3 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಭಾರತದ ಪರ ಕೊಹ್ಲಿ 111 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ಕೂಡ 56 ರನ್ಗಳ ಕಾಣಿಕೆ ನೀಡಿದರು.
ಪಾಕಿಸ್ಥಾನ ವಿರುದ್ಧದ ಈ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳಿಗೆ ಡಬಲ್ ಸಂತಸ ತಂದುಕೊಂಡಿದೆ. ಮೊದಲನೆಯದ್ದು ಈ ಪಂದ್ಯವನ್ನು ರೋಹಿತ್ ಪಡೆ ಏಕಪಕ್ಷೀಯವಾಗಿ ಗೆದ್ದುಕೊಂಡರೆ, ಎರಡನೆಯದ್ದು, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ಶತಕಗಳ ಬರವನ್ನು ನೀಗಿಸಿಕೊಂಡಿದ್ದಾರೆ.