ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲ ಮಣ್ಣುಪಾಲು : ಬಹಿರಂಗ ಪತ್ರದಲ್ಲಿ ವಿಜಯೇಂದ್ರ ಟೀಕೆ

ಈ ಬಾರಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ ಎಂದು ಲೇವಡಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ. ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರ ಬಾಕಿ ಪಾವತಿಸಲಾಗದ ದಾರುಣ ಸ್ಥಿತಿಗೆ ಕರ್ನಾಟಕವನ್ನು ತಂದು ನಿಲ್ಲಿಸಿದ ಅಪಕೀರ್ತಿಗೆ ತಾವು ಗುರಿಯಾಗಬಾರದು. 16ನೇ ಬಜೆಟ್​ನಲ್ಲಿ ಕರ್ನಾಟಕಕ್ಕೆ ಆರ್ಥಿಕವಾಗಿ ಜವಾಬ್ದಾರಿಯುತ, ಅಭಿವೃದ್ಧಿ ಆಧಾರಿತ ಮಾರ್ಗಸೂಚಿ ಮಂಡಿಸಲು ಒಂದು ಅವಕಾಶವಿದೆ ತಾವು ಮಂಡಿಸಲಿರುವ ಬಜೆಟ್ ಈ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಈ ಪತ್ರದಲ್ಲಿ ಹೇಳಿದ್ದಾರೆ.
ಈ ಬಾರಿಯ ಬಜೆಟ್​ ಸುಸ್ಥಿರ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ ಮತ್ತು ವಿವೇಚನಾಯುಕ್ತ ಹಣಕಾಸು ‌ನಿರ್ವಹಣೆಗೆ ಅಡಿಪಾಯ ಹಾಕುತ್ತದೆ ಎಂದು ಭಾವಿಸುತ್ತೇನೆ. ಈ ಮಹತ್ವದ ಪ್ರಯತ್ನದಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಬಿಟ್ಟಿ ಭಾಗ್ಯಗಳಲ್ಲಿ ಒಂದಾದ ಗೃಹ ಜ್ಯೋತಿ ನಂದಿಸಲು ಎಸ್ಕಾಂಗಳು ಸನ್ನದ್ಧವಾಗಿವೆ. 15 ಬಾರಿ ಬಜೆಟ್ ಮಂಡಿಸಿರುವ ದಾಖಲೆ ತಮ್ಮದೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಿಟ್ಟಿ ಭಾಗ್ಯಗಳಿಗೆ ಹಣ ಸರಿದೂಗಿಸಲು ಸಮತೋಲನ ಕಳೆದುಕೊಂಡಿರುವುದು ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಅನಾವರಣಗೊಳ್ಳುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಆರ್ಥಿಕ ದೂರದೃಷ್ಟಿಯಿಲ್ಲದ, ಬದ್ಧತೆಯಿಲ್ಲದ ಮತಬ್ಯಾಂಕ್ ಆಧಾರಿತ ಯೋಜನೆಗಳು ಸೊರಗುತ್ತಿವೆ, ಅಭಿವೃದ್ಧಿ ಎನ್ನುವುದು ಗಗನಕುಸುಮವಾಗಿದೆ, ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಇದರ ನಡುವೆ ಪಂಚ ಗ್ಯಾರಂಟಿಯ ಯೋಜನೆಗಳು ತೋರಿಕೆಗೆ, ಹೇಳಿಕೆಗೆ ಮಾತ್ರ ಎಂಬಂತೆ ಜನರಿಗೆ ತಲುಪುವಲ್ಲಿ ಬಹುತೇಕ ವಿಫಲವಾಗಿವೆ ಎಂದಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಸ್ಥಗಿತಗೊಂಡಂತೆ ಕಾಣುತ್ತಿದೆ, ಅನ್ನಭಾಗ್ಯ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಕೊಡುವ ಗರೀಬ್ ಕಲ್ಯಾಣ್ ಅನ್ನ ಯೋಜನೆಯ 5 ಕೆಜಿ ಅಕ್ಕಿಯ ಹೊರತುಪಡಿಸಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹೆಚ್ಚುವರಿ 5 ಕೆಜಿಯ ಅಕ್ಕಿಯೂ ಇಲ್ಲ, ಬದಲಾಗಿ ಹಣವೂ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿಲ್ಲ. ಯುವ ನಿಧಿ ಯೋಜನೆ ಅರ್ಜಿ ಕರೆಯುವ ಪ್ರಕಟಣೆಗಳನ್ನು ಬಿಟ್ಟರೆ ಯುವಜನರ ಖಾತೆಗಳಿಗೆ ಜಮೆಯಾದ ಬಗ್ಗೆ ಈವರೆಗೆ ವಿವರಗಳೇ ಲಭ್ಯವಾಗಿಲ್ಲ, ಶಕ್ತಿ ಯೋಜನೆಯಿಂದಾಗಿ ಕೆ.ಎಸ್.ಆರ್.ಟಿ.ಸಿ ಈಗಾಗಲೇ ನಷ್ಟದ ಹಾದಿ ಹಿಡಿದಿದೆ, ಹೆಚ್ಚುವರಿ ದರ ಏರಿಕೆ ಪರೋಕ್ಷವಾಗಿ ಪ್ರಯಾಣಿಕರ ಮೇಲೆ ಹೇರಲಾಗಿದೆ. ಇದೀಗ ಗೃಹಜ್ಯೋತಿ ಯೋಜನೆಗೆ ಸರ್ಕಾರ ಎಸ್ಕಾಂಗಳಿಗೆ ಹಣ ಪಾವತಿಸದ ಪರಿಣಾಮ ಯೋಜನೆ ಫಲಾನುಭವಿಗಳಿಂದಲೇ ವಸೂಲಿ ಮಾಡುವುದಕ್ಕಾಗಿ ಅಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ. ಆ ಮೂಲಕ ಗೃಹಜ್ಯೋತಿಗೆ ಇತಿಶ್ರೀ ಆಡುವ ಮುನ್ಸೂಚನೆ ನೀಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.

































 
 

ಪಂಚ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೇವಲ ಒಂದೂವರೆ ವರ್ಷದಲ್ಲೇ ಯೋಜನೆಗಳನ್ನು ಕಾರ್ಯಗತ ಮಾಡುವಲ್ಲಿ ಸಂಪೂರ್ಣ ಎಡವಿದೆ ಹಾಗೂ ಸರ್ಕಾರದ ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಂಡಿದ್ದು, ಕೃಷಿ ಸೇರಿದಂತೆ ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಬಿಡಿಗಾಸು ಇಲ್ಲದೆ ಬರಿಗೈಯಲ್ಲಿ ಕೈ ಚಾಚಿ ಕುಳಿತಿರುವುದು ಕರ್ನಾಟಕದ ದೌರ್ಭಾಗ್ಯವಾಗಿದೆ‌ ಎಂದಿದ್ದಾರೆ.
ಕಾಂಗ್ರೆಸ್ಸಿಗರಿಗೆ ಅಧಿಕಾರ ಅನುಭವಿಸಲು ಜನ ಆಯ್ಕೆ ಮಾಡಿಲ್ಲ, ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆಯಲ್ಲಿ ಚುನಾಯಿಸಿದ್ದಾರೆ, ಆದರೆ ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲವೂ ಮಣ್ಣು ಪಾಲಾಗುತ್ತಿವೆ. ಸ್ವಪ್ರತಿಷ್ಠೆ, ಸ್ವಾರ್ಥ, ಭ್ರಷ್ಟಾಚಾರದಲ್ಲಿ ಮುಳುಗೇಳುವ ಗುರಿಯನ್ನು ಮಾತ್ರ ಈ ಕಾಂಗ್ರೆಸ್ ಸರ್ಕಾರ ಇಟ್ಟುಕೊಂಡಂತೆ ಕಾಣುತ್ತಿದೆ. 2025 ಜನತೆ ಹಾಗೂ ರಾಜ್ಯದ ಪಾಲಿಗೆ ಕರಾಳ ವರ್ಷವಾಗುವ ಸೂಚನೆ ಕಾಣುತ್ತಿದೆ, ಜನಾಕ್ರೋಶ ಭುಗಿಲೇಳುವ ಮುನ್ನ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಕೊಟ್ಟು ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top