ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಜಿಲ್ಲಾದ್ಯಂತ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಂಧಿಕಟ್ಟೆ ಬಳಿ, ಕಬಕ ಜಂಕ್ಷನ್, ವಿಟ್ಲ ಜಂಕ್ಷನ್, ಕುಂಬ್ರ ಜಂಕ್ಷನ್ ಹಾಗೂ ಉಪ್ಪಿನಂಗಡಿ ಪೇಟೆಯಲ್ಲಿ ನಡೆಯಿತು.
ವಿವಿಧ ಪಕ್ಷಗಳ ಮುಖಂಡರು, ಧಾರ್ಮಿಕ ಸಾಮಾಜಿಕ ಮುಖಂಡರು, ವಿದ್ಯಾರ್ಥಿಗಳು, ಲಾರಿ ಚಾಲಕರು, ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ಅತ್ಯುತ್ಸಾಹದಿಂದ ಪಾಲ್ಗೊಂಡು ಎಸ್ ಡಿ ಪಿ ಐ ನಡೆಸುವ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಶ್ರಫ್ ಬಾವು, ಅಸಮರ್ಪಕ ಹಾಗೂ ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಈಗಾಗಲೇ ವಿವಿಧ ಸ್ತರದ ಹೋರಾಟಗಳ ರೂಪುರೇಷೆ ಪಕ್ಷದ ಜಿಲ್ಲಾ ಸಮಿತಿ ರೂಪಿಸಿದ್ದು, ಇದರ ಭಾಗವಾಗಿ ಜಿಲ್ಲಾದ್ಯಂತ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನ ನಡೆಸಿದೆ. ಮುಂದಿನ ಭಾಗವಾಗಿ ಫೆ.25 ರಂದು ಟೋಲ್ ಗೇಟ್ ಬಳಿ ಒಂದು ದಿನದ ಧರಣಿ ಸತ್ಯಾಗ್ರಹ ಕೂಡ ನಡೆಸಲು ಜಿಲ್ಲಾ ಸಮಿತಿಯು ತೀರ್ಮಾನಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.