ವಿನಾಯಿತಿ ನೀಡದ ತಲಪಾಡಿ ಟೋಲ್‌ಗೇಟ್‌ಗೆ ಗಡಿ ಭಾಗದವರಿಂದ ತಿರುಗೇಟು
ಮಂಗಳೂರು: ಕೇರಳದ ಮಂಜೇಶ್ವರ ಪಂಚಾಯಿತಿ ವ್ಯಾಪ್ತಿಯ ಗಡಿನಾಡ ಕನ್ನಡಿಗರು ತಮಗೆ ವಿನಾಯಿತಿ ನೀಡದ ತಲಪಾಡಿ ಹೆದ್ದಾರಿ ಟೋಲ್‌ಗೇಟ್‌ಗೆ ಸಡ್ಡುಹೊಡೆದು ಪಕ್ಕದಲ್ಲೇ ಬೇರೆಯೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಲಪಾಡಿ ಟೋಲ್‌ಗೇಟ್‌ನಲ್ಲಿ ವಿನಾಯಿತಿ ನೀಡುವಂತೆ ಹಲವು ಸಮಯಗಳಿಂದ ಒತ್ತಾಯಿಸುದ್ದರೂ ಟೋಲ್ ಸಂಸ್ಥೆ ಸ್ಪಂದಿಸಿಲ್ಲ. ಹೀಗಾಗಿ ತಲಪಾಡಿ ಟೋಲ್‌ಗೇಟ್‌ನಲ್ಲಿ ಗಡಿ ಪ್ರದೇಶದ ಜನರಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ಹೆದ್ದಾರಿಯ ಹತ್ತಿರದಲ್ಲೇ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ತಲಪಾಡಿ ಟೋಲ್‌ಗೇಟ್ ಸ್ಥಾಪಿಸಿದ ಆರಂಭದಲ್ಲಿ ಕರ್ನಾಟಕ ಮತ್ತು ಕೇರಳ ಭಾಗದ ಐದು ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಲಾಗುತ್ತಿತ್ತು. ಬಳಿಕ ಕೇರಳ ಭಾಗದ ಜನರಿಗೆ ವಿನಾಯಿತಿ ರದ್ದು ಮಾಡಲಾಗಿದೆ. ಇದನ್ನು ಖಂಡಿಸಿ ಸರ್ವಪಕ್ಷಗಳು ಹಾಗೂ ಸಮಾನ ಮನಸ್ಕರ ನೇತೃತ್ವದ ಮಂಜೇಶ್ವರ ಟೋಲ್‌ಗೇಟ್ ಕ್ರಿಯಾಸಮಿತಿ ರಚಿಸಿ ಹೋರಾಟ ನಡೆಸಲಾಗಿತ್ತು. ಆದರೆ ಟೋಲ್ ಸಂಸ್ಥೆಯವರು ಯಾವ ಹೋರಾಟಕ್ಕೂ ಕ್ಯಾರೇ ಎಂದಿಲ್ಲ.
ಈಗಿನ ರಾಷ್ಟ್ರೀಯ ಹೆದ್ದಾರಿಗೂ ಮೊದಲು ಬೇರೆ ರಸ್ತೆ ಇತ್ತು. ಈ ರಸ್ತೆಯನ್ನೇ ಬಳಸಿಕೊಂಡು ಮಂಗಳೂರು ಸಂಪರ್ಕಿಸಲು ಪ್ರತ್ಯೇಕ ರಸ್ತೆ ನಿರ್ಮಾಣದ ಯೋಜನೆ ಸಿದ್ಧಗೊಂಡಿದೆ. ತಲಪಾಡಿ ಮರಿಯಾಶ್ರಮ ಚರ್ಚ್ ಹಿಂಭಾಗದ ಹಳೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ನದಿಗೆ ಸೇತುವೆ ನಿರ್ಮಿಸಿ ಮಂಗಳೂರು ರಸ್ತೆಗೆ ಸಂಪರ್ಕಿಸುವ ಯೋಜನೆ ಇದು.
ಮಂಜೇಶ್ವರ ಆಡಳಿತಾತ್ಮಕವಾಗಿ ಕೇರಳದಲ್ಲಿ ಇದ್ದರೂ ಈ ಭಾಗದ ಜನರು ಉದ್ಯೋಗ, ಶಿಕ್ಷಣ ಸೇರಿದಂತೆ ಎಲ್ಲ ಅಗತ್ಯಗಳಿಗೆ ಮಂಗಳೂರನ್ನೇ ಆಶ್ರಯಿಸಿದ್ದಾರೆ. ಆದರೆ, ನಿತ್ಯ ಇಲ್ಲಿ ಟೋಲ್ ಪಾವತಿಸಿ ಬರುವ ಅನಿವಾರ್ಯತೆಯಿಂದ ಅವರಿಗೆ ಸಂಕಷ್ಟ ಉಂಟಾಗಿದೆ. ಹೀಗಾಗಿ ಹಲವು ಬಾರಿ ಮಂಜೇಶ್ವರ ಗ್ರಾ.ಪಂ ವ್ಯಾಪ್ತಿಯ ನಾಗರಿಕರು ಮತ್ತು ಹೋರಾಟ ಸಮಿತಿ ಮೂಲಕ ಮನವಿ ಮಾಡಿದರೂ ಟೋಲ್‌ಗೇಟ್ ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿಲ್ಲ. ಹೀಗಾಗಿ ಗಡಿನಾಡ ಜನರು ಪರ್ಯಾಯ ರಸ್ತೆ ನಿರ್ಮಾಣದ ಯೋಜನೆ ರೂಪಿಸಿದ್ದಾರೆ. ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಮಂಜೇಶ್ವರ ಗ್ರಾಮ ಪಂಚಾಯಿತಿಯ ನಿಲುವನ್ನು ಕರ್ನಾಟಕದ ತಲಪಾಡಿ ಹಾಗೂ ಸೋಮೇಶ್ವರ ಪಂಚಾಯಿತಿಗಳು ಬೆಂಬಲಿಸಿವೆ. ಈ ರಸ್ತೆಯಾದರೆ ಮಂಗಳೂರಿಗರೂ ಇದೇ ರಸ್ತೆ ಬಳಸಿ ಕೇರಳ ತಲುಪಲು ಸಾಧ್ಯವಾಗಲಿದೆ. ಹೀಗಾಗಿ ತಲಪಾಡಿ ಹಾಗೂ ಸೋಮೇಶ್ವರ ಪಂಚಾಯಿತಿ ಬೆಂಬಲ ಸೂಚಿಸಿವೆ ಎನ್ನಲಾಗಿದೆ.