ಬೆಂಗಳೂರು : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ಮಾ.31 ರ ವರೆಗೆ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಏ.1, 2019ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಆಗಸ್ಟ್ 17, 2023ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇನ್ನೂ ಬಹಳಷ್ಟು ವಾಹನ ಸವಾರರು ಎಚ್ ಎಸ್‌ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ಲ. ಮತ್ತೆ ಗಡುವು ವಿಸ್ತರಿಸುವಂತೆ ಮನವಿ ಮಾಡಿದ ಹಿನ್ನೆಲೆ ಮಾ. 31 ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಉಳಿದಂತೆ 17-08-2023ರಲ್ಲಿ ಹೊರಡಿಸಿದ ಆದೇಶದಲ್ಲಿ ಬೇರೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ.
ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್ 50 ಹಾಗೂ 51ರನ್ವಯ ಎಲ್ಲ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್‌ಗಳನ್ನು ಅಳವಡಿಕೆ ಮಾಡಬೇಕಿದೆ. ಕರ್ನಾಟಕದ ವಾಹಗಳಿಗೆ ಈ ನಿಯಮವನ್ನು ಕಡ್ಡಾಯ ಮಾಡಲಾಗಿದೆ. ಇದರ ಮೇಲೂ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ ಎಂದು ಅಧಿಸೂಚನೆ ತಿಳಿಸಿದೆ.