ಬೆಂಬಲಿಗರಿಂದ ಆಸ್ಪತ್ರೆ ಎದುರು ಮಚ್ಚು, ಲಾಂಗ್ ಪ್ರದರ್ಶಿಸಿ ಭೀತಿ ಸೃಷ್ಟಿ
ಬೆಂಗಳೂರು : ಕಾಂಗ್ರೆಸ್ ಮುಖಂಡರೊಬ್ಬರು ನಿನ್ನೆ ತಡರಾತ್ರಿ ಬೆಂಗೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಅಶೋಕನಗರದ ಗರುಡ ಮಾಲ್ ಬಳಿ ತಡರಾತ್ರಿ 1 ಗಂಟೆ ವೇಳೆಗೆ ಕಾಂಗ್ರೆಸ್ ಮುಖಂಡ ಹೈದರ್ ಅಲಿ ಎಂಬವರನ್ನು ಕೊಲೆ ಮಾಡಲಾಗಿದೆ. ಹೈದರ್ ಅಲಿ ಶನಿವಾರ ರಾತ್ರಿ ಲೈವ್‌ಬ್ಯಾಂಡ್ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಸ್ನೇಹಿತನ ಜೊತೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಹೈದರ್ ಅಲಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿ ಅಶೋಕ ನಗರ ಠಾಣೆ ಪೊಲೀಸರು ರಕ್ತದ ಮಡುವಲ್ಲಿ ಬಿದ್ದಿದ್ದ ಹೈದರ್ ಅಲಿಯನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಹೈದರ್ ಅಲಿ ಮೃತಪಟ್ಟಿದ್ದರು. ವಿಚಾರ ತಿಳಿದು ಹೈದರ್ ಅಲಿಯ ಬೆಂಬಲಿಗರು ಬೌರಿಂಗ್ ಆಸ್ಪತ್ರೆ ಬಳಿ ಜಮಾಯಿಸಿ ಲಾಂಗು, ಮಚ್ಚು ಹಿಡಿದು ಆಸ್ಪತ್ರೆ ಬಳಿ ಝಳಪಿಸಿದರು. ಬೌರಿಂಗ್ ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಅಶೋಕನಗರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಅಶೋಕನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಹೈದರ್ ಅಲಿ ಜೊತೆಯಲ್ಲಿದ್ದ ಸ್ನೇಹಿತನಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಪಾಳ್ಯ ನಿವಾಸಿಯಾಗಿರುವ ಹೈದರ್ ಅಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಎನ್.ಎ ಹ್ಯಾರಿಸ್ ಪರ ಪ್ರಚಾರ ಮಾಡಿದ್ದರು.
ಕೊಲೆಯಾದ ಹೈದರ್ ಅಲಿ ರಾಜಕೀಯ ಮುಖಂಡ ಅಲ್ಲ, ಸಣ್ಣಮಟ್ಟದ ಸಾಮಾಜಿಕ ಕಾರ್ಯಕರ್ತನಾಗಿದ್ದರು ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್ ತಿಳಿಸಿದ್ದಾರೆ. ಹೈದರ್ ಅಶೋಕನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದರು. ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ 11 ಕೇಸ್ ದಾಖಲಾಗಿದ್ದವು. ಮಾರಣಾಂತಿಕ ಹಲ್ಲೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಹೈದರ್ ಅಲಿ 2014ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು. 2022ರಿಂದ ಯಾವುದೇ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. ಆದರೆ ತನ್ನ ಏರಿಯಾದಲ್ಲಿ ಹವಾ ಮೆಂಟೈನ್ ಮಾಡುತ್ತಿದ್ದನು. ಕೊಲೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದರು.