ಒಂದೇ ವರ್ಷದಲ್ಲಿ ದುಪ್ಪಟ್ಟಾದ ಬೆಲೆಯಿಂದ ಜನ ಕಂಗಾಲು
ಕಾರ್ಕಳ : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಜೀವನ ದುಸ್ತರವಾಗಿದೆ. ಈಗ ಅಡುಗೆ ಎಣ್ಣೆ ಬೆಲೆಯೂ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಸೂರ್ಯಕಾಂತಿ, ನೆಲಕಡಲೆ, ಸಾಸಿವೆ, ತಾಳೆಎಣ್ಣೆ ಸೇರಿದಂತೆ ಎಲ್ಲ ರೀತಿಯ ಖಾದ್ಯತೈಲದ ಬೆಲೆ ಏರಿಕೆಯಾಗಿದೆ. ಕೊಬ್ಬರಿ ಎಣ್ಣೆ ಬೆಲೆ ಅಂಕೆಗೆ ಸಿಗದಂತೆ ಏರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ತೆಂಗಿನಎಣ್ಣೆ ಬೆಲೆ ಲೀಟರಿಗೆ 300 ರೂ. ಸಮೀಪಿಸಿದೆ. ತೆಂಗು ಯಥೇಚ್ಚವಾಗಿ ಬೆಳೆಯುವ ಕರಾವಳಿಯಲ್ಲೂ ಲೀಟರಿಗೆ 250-260 ಆಗಿದ್ದು, ಜನರು ಕಂಗಾಲಾಗಿದ್ದಾರೆ.
ಎಳನೀರು ಯಥೇಚ್ಛವಾಗಿ ಮಾರಾಟವಾಗುತ್ತಿರುವ ಕಾರಣ ಕೊಬ್ಬರಿ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರ ನೇರ ಪರಿಣಾಮ ತೆಂಗಿನಎಣ್ಣೆಯ ಮೇಲೆ ಆಗಿದೆ. ಕಳೆದ ಸುಮಾರು ಒಂದು ವರ್ಷದಿಂದೀಚೆಗೆ ತೆಂಗಿನಕಾಯಿ ಮತ್ತು ಎಳನೀರಿನ ಬೆಲೆ ಏರುಗತಿಯಲ್ಲಿದೆ. ಅದರ ಪರಿಣಾಮ ಕೊಬ್ಬರಿ ಎಣ್ಣೆ ಮೇಲೆ ಆಗಿದೆ. ವರ್ಷದ ಹಿಂದೆ 125-130 ರೂ.ಗೆ ಸಿಗುತ್ತಿದ್ದ ತೆಂಗಿನಎಣ್ಣೆ ಬೆಲೆ ಈಗ ದುಪ್ಪಟ್ಟು ಆಗಿದೆ.
ಕರಾವಳಿ ಭಾಗದಲ್ಲಿ ಜನ ಅಡುಗೆಗೆ ತೆಂಗಿನಎಣ್ಣೆಯನ್ನೇ ಬಳಸುತ್ತಾರೆ. ದೇವರಿಗೆ ದೀಪ ಹಚ್ಚಲು ಹಾಗೂ ಇನ್ನಿತರ ಶುಭಕಾರ್ಯಗಳಿಗೆ ತೆಂಗಿನಎಣ್ಣೆ ಅನಿವಾರ್ಯ. ಹೀಗಾಗಿ ತೆಂಗಿನೆಣ್ಣೆ ಬೆಲೆ ಏರಿಕೆ ಜನರ ಜೇಬು ಸುಡಲಾರಂಭಿಸಿದೆ.
ಈ ವರ್ಷ ಫೆಬ್ರವರಿಯಿಂದಲೇ ಸೆಕೆ ಜೋರಾಗಿದ್ದು, ಇದರಿಂದ ಎಳನೀರಿಗೆ ಹೆಚ್ಚು ಬೇಡಿಕೆಯಿದೆ. ಇದರ ಜೊತೆ ಕೊಬ್ಬರಿಯ ದರವೂ ಏರಿಕೆಯಾಗಿದೆ. ಸನ್‌ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆ ಕೂಡ 10-20 ರೂ. ರೂ. ಹೆಚ್ಚಾಗಿದೆ.