ಎಸ್‌ಎಸ್‌ಎಲ್‌ಸಿ ತೇರ್ಗಡೆ ಕನಿಷ್ಠ ಅಂಕ ಶೇ.33ಕ್ಕಿಳಿಸಲು ಖಾಸಗಿ ಶಾಲೆಗಳ ಒತ್ತಾಯ

ಸಿಬಿಎಸ್‌ಎ, ಐಸಿಎಸ್‌ಯ ಬೋರ್ಡ್‌ ಮಾದರಿಯಲ್ಲಿ ಅಂಕ ನಿಗದಿಗೆ ಆಗ್ರಹ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಉತ್ತೀರ್ಣಕ್ಕೆ ಕನಿಷ್ಠ 35 ಅಂಕದ ಬದಲು 33ಕ್ಕೆ ಇಳಿಸಿ ಎಂದು ಸರ್ಕಾರಕ್ಕೆ ಖಾಸಗಿ ಶಾಲೆಗಳು ಒತ್ತಾಯ ಮಾಡಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಕುರಿತು ಪತ್ರ ಬರೆದಿರುವ ಖಾಸಗಿ ಶಾಲೆಗಳ ಒಕ್ಕೂಟ ಕನಿಷ್ಠ 35 ಅಂಕಗಳ ಬದಲಾಗಿ ಈ ವರ್ಷದಿಂದಲೇ ಪಾಸ್‌ ಮಾನದಂಡವನ್ನು 33 ಅಂಕಗಳಿಗೆ ಬದಲಾವಣೆ ಮಾಡುವಂತೆ ಒತ್ತಾಯಿಸಿದೆ. ಸರಕಾರ ಸರಕಾರಿ ಮತ್ತು ಅನುದಾನಿತ ಶಾಲೆಗಳ ಎಸ್‌ಎಸ್‌ಎಲ್‌ಸಿ ಮಕ್ಕಳ ತೇರ್ಗಡೆಗೆ ಕನಿಷ್ಠ ಶೇ.35 ಅಂಕ ಗಳಿಕೆ ಕಡ್ಡಾಯಗೊಳಿಸಿದೆ.
ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮದಲ್ಲಿ ಪಾಸ್ ಅಂಕ 33 ಇದೆ. ಇದೇ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ 33 ಅಂಕಗಳಿಗೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಹೇಳಿದೆ.
ಈಗಾಗಲೇ 33 ಅಂಕದ ಮಾದರಿ ಜಾರಿಗೆ ಶಿಕ್ಷಣ ಇಲಾಖೆಯ ಜೊತೆ ಖಾಸಗಿ ಶಾಲೆಗಳು ಸಭೆ ಮಾಡಿದ್ದವು. ಆದರೆ ಈವರೆಗೂ ಶಿಕ್ಷಣ ಇಲಾಖೆ ಈ ಪ್ರಸ್ತಾಪವನ್ನು ಪರಿಗಣನೆ ಮಾಡಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದೆ. ಅಂಕ ಕಡಿತದ ಬಗ್ಗೆ ನಿರ್ಧಾರ ಮಾಡುವಂತೆ ಸಭಾಪತಿ ಬಸವರಾಜ್ ಹೊರಟ್ಟಿ ಸಹ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.
10ನೇ ತರಗತಿ ಉತ್ತೀರ್ಣಕ್ಕೆ ಕನಿಷ್ಠ 33 ಅಂಕಗಳು ಸಾಕು ಎಂಬ ನಿಯಮ CBSE, ICSE ಸೇರಿ ವಿವಿಧ ಬೋರ್ಡ್‌ಗಳಲ್ಲಿ ಇದೆ. ಬೇರೆ ಬೋರ್ಡ್‌ನಲ್ಲಿ 100ಕ್ಕೆ 33 ಅಂಕ ಪಡೆದರೆ ಪಾಸ್ ಆಗುತ್ತಾರೆ. 100ರಲ್ಲಿ ಇಂಟ್ರನಲ್ ಅಸೆಸ್ಮೆಂಟ್ ಅಂಕ 20ನ್ನು ಕೇಂದ್ರ ಬೋರ್ಡ್‌ಗಳು ಸಂಪೂರ್ಣವಾಗಿ ಪರಿಗಣಿಸುತ್ತವೆ.
ಕೇಂದ್ರದ ಪಠ್ಯಕ್ರಮದ ಶಾಲೆಗಳಲ್ಲಿ 33 ಪಾಸ್ ಅಂಕ ಇದ್ದು ರಾಜ್ಯ ಪಠ್ಯದಲ್ಲಿ 35 ಅಂಕ ಇರುವುದು ತಾರತಮ್ಯ ಮಾಡಿದಂತೆ ಆಗುತ್ತದೆ. ರಾಜ್ಯಪಠ್ಯ ಕ್ರಮದಲ್ಲಿ 20 ಇಂಟರ್ನಲ್‌ ಅಸೆಸ್ಮೆಂಟ್ ಅಂಕಗಳಲ್ಲಿ ಸಂಪೂರ್ಣ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ತಾರತಮ್ಯದಿಂದ ಕೇಂದ್ರ ಬೋರ್ಡ್‌ಗಳಲ್ಲಿ ಫಲಿತಾಂಶ ಜಾಸ್ತಿ ಆಗುತ್ತಿದೆ. ಪೋಷಕರು ಕೇಂದ್ರ ಬೋರ್ಡ್‌ ಇರುವ ಶಾಲೆಗೆ ಮಕ್ಕಳನ್ನ ಸೇರಿಸುತ್ತಿದ್ದಾರೆ. ಹೀಗೆ ಆದರೆ ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮತ್ತು ಕನ್ನಡಕ್ಕೆ ಅನ್ಯಾಯ ಆಗಲಿದೆ. ಹೀಗಾಗಿ ಕೇಂದ್ರ ಬೋರ್ಡ್ ಮಾದರಿಯಲ್ಲೇ SSLC ಪಾಸ್ ಅಂಕ 33ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top