ಬೆಂಗಳೂರಿನ ಅಶೋಕ್ ನಗರದ ಸ್ಮಶಾನದ ಕಾಳಿಕಾಂಬ ಗುಡಿಯಲ್ಲಿ ರಕ್ತಾಭಿಷೇಕ
ಮಂಗಳೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಕಾಳಿಕಾಂಬ ಗುಡಿಯ ಅರ್ಚಕರಿಗೆ ವಿಚಾರ ತಿಳಿಸದೆ ಈ ಇಬ್ಬರು ಆರೋಪಿಗಳು ಕುರಿಗಳನ್ನು ಬಲಿ ನೀಡಿ ವಾಮಾಚಾರ ಮಾಡಿದ್ದಾರೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ ಮತ್ತು ಸುಮಾ ಆಚಾರ್ಯ ಹೆಸರಿನ ಚೀಟಿ ಕಾಳಿಕಾಂಬ ದೇವಿ ಕೊರಳಿಗೆ ಹಾಕಲಾಗಿತ್ತು. ಬಲಿ ನೀಡಿದ್ದ ಕುರಿಗಳ ರಕ್ತವನ್ನ ಸ್ನೇಹಮಯಿ, ಗಂಗರಾಜು ಫೋಟೋಗೆ ಅರ್ಪಣೆ ಮಾಡಲಾಗಿತ್ತು. ವಾಮಾಚಾರದ ದೃಶ್ಯ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ನಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮಸಾಜ್ ಪರ್ಲಾರ್ ಗಲಾಟೆಯಲ್ಲಿ ಸೆರೆಯಾಗಿರುವ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ಪರಿಶೀಲಿಸಿದಾಗ ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು ಫೋಟೊಗೆ ಹಚ್ಚಿರುವ ವೀಡಿಯೊ ಪೊಲೀಸರಿಗೆ ಲಭ್ಯವಾಗಿತ್ತು. ಸರಣಿ ಪ್ರಾಣಿ ಬಲಿ ಮಾಡಿರುವ ವೀಡಿಯೊಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆ ಪೊಲೀಸರಿಗೆ ಆರೋಪಿಗಳು ವಾಮಾಚಾರ ಮಾಡಿಸಿರುವುದು ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಕಾಳಿಕಾಂಬ ಗುಡಿಯಲ್ಲಿ ಎಂದು ತಿಳಿದುಬಂದಿದೆ.
ರಾಮ ಸೇನಾ ಕಾರ್ಯಕರ್ತರು ಜನವರಿ 30ರಂದು ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಪಾರ್ಲರ್ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ಮಾಡಿದ್ದರು. ಪಾರ್ಲರ್ನ ಪೀಠೋಪಕರಣ, ಕನ್ನಡಿ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪುಡಿಗೈದು ದಾಂಧಲೆ ಎಸಗಿದ್ದರು.
ಈ ವೇಳೆ ಯಾವುದೇ ಗ್ರಾಹಕರು ಇಲ್ಲವಾಗಿದ್ದು, ಸೆಲೂನ್ನಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ದಾಳಿಯ ವೀಡಿಯೊಗಳು ಲಭ್ಯವಾಗಿದ್ದು, 9ರಿಂದ 10 ಕಾರ್ಯಕರ್ತರು ದಾಳಿ ನಡೆಸಿರುವುದು ವೀಡಿಯೊದಲ್ಲಿ ದಾಖಲಾಗಿತ್ತು. ಘಟನೆ ಬೆನ್ನಲ್ಲೇ ಮಾಲೀಕರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಆಗಮಿಸಿ ಮಾಹಿತಿ ಪಡೆದಿದ್ದು, ಮಹಿಳಾ ಸಿಬ್ಬಂದಿ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಘಟನೆ ಸಂಬಂಧ ದಕ್ಷಿಣ ಕನ್ನಡ ಪೊಲೀಸರು ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಿದ್ದಾರೆ.