ಉಪ್ಪಿನಂಗಡಿ: ಮಖೆ ಜಾತ್ರೆ ಸಡಗರದಲ್ಲಿದ್ದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಯುವಕನೋರ್ವ ನದಿಗೆ ಹಾರಿರುವ ಕುರಿತು ಸುದ್ದಿಯಾಗುತ್ತಿದ್ದಂತೆ ಆತಂಕ ಸೃಷ್ಟಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ
ದೇಗುಲದ ರಥೋತ್ಸವ ನಡೆಯುತ್ತಿದ್ದಂತೆಯೇ ಪೊಲೀಸರು ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳದತ್ತ ಧಾವಿಸುತ್ತಿರುವುದು ಕಂಡು ಬಂದಿತ್ತು. ಜತೆಗೆ ಭಕ್ತರು ಕೂಡ ಅತ್ತ ಧಾವಿಸತೊಡಗಿದರು. ಈ ವೇಳೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಂದಿಗೆ ಈ ಬೆಳವಣಿಗೆ ಬಗ್ಗೆ, ಕುತೂಹಲ ಮೂಡಿ ವಿಚಾರಿಸತೊಡಗಿದರು. ಆದರೆ ನದಿಗೆ ಹಾರಿದ ಯುವಕನನ್ನು ಆತನ ಬಂಧುಗಳು ರಕ್ಷಿಸುವ ಅಥವಾ ಹುಡುಕಾಟ ಮಾಡದೇ ಇದ್ದಾಗ ಪರಿಶೀಲನೆ ನಡೆಸಿದ ಬಳಿಕ ನಿಜಾಂಶ ಬಯಲಾಯಿತು.
ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವ ಜಾತ್ರೆಯಲ್ಲಿ ಬಂದೋಬಸ್ತು ನಿರತ ಪೊಲೀಸರ ಕಣ್ಣಿಗೆ ಕಾಣಿಸಿದ್ದು ಕೂಡಲೇ ಪೊಲೀಸರು ಆತನನ್ನು ಹಿಂಬಾಲಿಸುತ್ತಾರೆ. ಇದನ್ನು ಅರಿತ ಆತ ಕ್ಷಣಾರ್ಧದಲ್ಲಿ ಪರಾರಿಯಾಗಲು ಯತ್ನಿಸುತ್ತಾನೆ. ಪೊಲೀಸರು ಬೆನ್ನಟ್ಟಿದಾಗ ಅಣೆಕಟ್ಟಿನ ಹಿನ್ನೀರಿನಿಂದ ತುಂಬಿದ್ದ ನೇತ್ರಾವತಿ ನದಿಗೆ ಧುಮುಕಿದ್ದಾನೆ.
ಮಾತ್ರವಲ್ಲದೆ ನದಿಯ ಮಧ್ಯಭಾಗಕ್ಕೆ ಹೋಗಿ ತನ್ನನ್ನು ಹಿಡಿಯುವಂತೆ ಪೊಲೀಸರಿಗೆ ಸವಾಲು ಹಾಕಿದ್ದಾನೆ. ಜಾತ್ರೆಯ ಮಧ್ಯೆ ಅನಪೇಕ್ಷಿತ ಘಟನಾವಳಿಗೆ ಅವಕಾಶವಾಗಬಾರದೆಂಬ ಕಾರಣಕ್ಕೆ ಸ್ಥಳದಲ್ಲಿ ಮೌನಕ್ಕೆ ಜಾರಿದ್ದ ಪೊಲೀಸರು ಆತ ದಡ ಸೇರಬಹುದೆಂದು ಅಯಕಟ್ಟಿನ ಪ್ರದೇಶದಲ್ಲಿ ನಿಗಾ ಇರಿಸಿದರಾದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.