ವಿಟ್ಲ: ಹಣಕ್ಕಾಗಿ ದೈವನರ್ತಕಗೆ ಪೀಡನೆ, ಬೆದರಿಕೆ ನೀಡಿದ ಆರೋಪದಲ್ಲಿ ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ ನೀಡಿದೆ.
ವಿಟ್ಲದ ದಲಿತ ಸೇವಾ ಸಮಿತಿಯ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಕಸಬಾ ಗ್ರಾಮದ ಸುರುಳಿಮೂಲೆ ನಿವಾಸಿ ದೈವನರ್ತಕ ಆನಂದ ಎಸ್. ಎಂಬವರು ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನಾಟಿ ವೈದ್ಯ, ಜ್ಯೋತಿಷ್ಯದ ಜೊತೆಗೆ ದೈವನರ್ತಕರಾಗಿರುವ ಆನಂದ ಅವರು ವಿಟ್ಲದ ನೆಕ್ಕರೆ ಕಾಡು ನಿವಾಸಿ ಕಮಲಾ ಎಂಬವರ ಮನೆಯಲ್ಲಿ ಕೋರಿಕೆಯ ಮೇರೆಗೆ ಮಾನಸಿಕ ಶಾಂತಿ ಹಾಗೂ ಅಭಿವೃದ್ಧಿಗಾಗಿ ವಧಾರ್ಮಿಕ ಕಾರ್ಯ ನಡೆಸಿದ್ಜರು. ಈ ಬಗ್ಗೆ ಮೊದಲೇ ನಿರ್ಧರಿಸಿದಂತೆ ಹದಿನೈದು ಸಾವಿರ ರೂ.ಕಮಲಾ ಕುಟುಂಬ ನೀಡಬೇಕಾಗಿತ್ತು. ಆದರೆ ಕಾರ್ಯಕ್ರಮ ಮುಗಿದು ಹತ್ತು ತಿಂಗಳು ಕಳೆದರೂ ಕಮಲಾ ಮನೆಯವರು ಆನಂದ ಅವರಿಗೆ ಹಣ ನೀಡಿಲ್ಲವಾಗಿದೆ. ಈ ಬಗ್ಗೆ ಕೇಳಿದಾಗ ಕಮಲ ಅವರು ಆನಂದ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ಆನಂದ ಅವರು ಠಾಣೆಗೆ ಹೋಗಿದ್ದಾಗ ದೂರುದಾರೆ ಕಮಲಾ ಅವರ ಜೊತೆ ವಿಟ್ಲದ ದಲಿತ ಸೇವಾ ಸಮಿತಿಯ ಮುಖಂಡ ಸೇಸಪ್ಪ ಬೆದ್ರಕಾಡು ಇದ್ದರು. ಎಸೈಯವರ ಸಮ್ಮುಖದಲ್ಲೇ ಸೇಸಪ್ಪ ಬೆದ್ರಕಾಡು ಅವರು ಆನಂದ ಅವರನ್ನು ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಣ ನೀಡಬೇಕು, ಇಲ್ಲದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸಿ ಜೀವಮಾನ ಪೂರ್ತಿ ಜೈಲಿಗೆ ಹಾಕಿಸುತ್ತೇನೆಂದು ಬೆದರಿಸಿದ್ದರೆನ್ನಲಾಗಿದೆ. ಬಳಿಕ ಸಹಿ ಹಾಕಿದ ವಿಟ್ಲ ಕೆನರಾ ಬ್ಯಾಂಕ್ ಖಾತೆಯ ಐದು ಖಾಲಿ ಚೆಕ್ಕುಗಳನ್ನು ಪಡೆದು ಪ್ರತೀ ತಿಂಗಳ 20ರಂದು ಇಪ್ಪತ್ತೈದು ಸಾವಿರದಂತೆ ನೀಡಬೇಕೆಂದು ಸೇಸಪ್ಪ ಬೆದ್ರಕಾಡು ಒತ್ತಡ ಹಾಕಿದ್ದಾರೆಂದು ಆನಂದ ಅವರು ದೂರಿನಲ್ಲಿ ವಿವರಿಸಿದ್ದಾರೆ. ಸೇಸಪ್ಪ ಬೆದ್ರಕಾಡು ಒತ್ತಡದ ಮೇರೆಗೆ ಪೊಲೀಸ್ ಅಧಿಕಾರಿಗಳು ಆನಂದ ಅವರನ್ನು ಬೆದರಿಸಿ ಹೇಳಿಕೆ ದಾಖಲಿಸಿದ್ದಲ್ಲದೇ ಮರುದಿನ ದೂರು ನೀಡಿದಾಗ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನದಾಗಿದೆ. ಅಲ್ಲದೇ ಸೇಸಪ್ಪ ಬೆದ್ರಕಾಡು ಪತ್ನಿ ಪ್ರೇಮಾ ಅವರ ಖಾತೆಗೆ ಫೋನ್ ಪೇ ಮೂಲು ಇಪ್ಪತೈದು ಸಾವಿರ ರೂಪಾಯಿ ಜಮಾ ಮಾಡಿಸಿದ್ದಾರೆ. ಇದರಿಂದ ನೊಂದ ಆನಂದ ಅವರು ವಿವರವಾದ ದಾಖಲೆಗಳ ಸಹಿತ ಜಿಲ್ಲಾ ಎಸ್ಪಿಯವರಿಗೆ ದೂರು ನೀಡಿದ್ದರು.
ಈ ಮಧ್ಯೆ ನ್ಯಾಯವಾದಿ ಶಿವಾನಂದ ವಿಟ್ಲ ಅವರ ಮೂಲಕ ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಾದ ಸೇಸಪ್ಪ ಬೆದ್ರಕಾಡು ಮತ್ತು ಕಮಲಾ ವಿರುದ್ಧ ಬಿ.ಎನ್.ಎಸ್.ಕಾಯ್ದೆಯಂತೆ 308, 351, 318(4), 352, 127(2), R/W61(2)ರಂತೆ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.