ಪುತ್ತೂರು: ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ 24ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಸಭಾಭವನದಲ್ಲಿ ಗುರುವಾರ ಸಂಜೆ ಉದ್ಘಾಟನೆಗೊಂಡಿತು.

ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಆಡಳಿತಾಧಿಕಾರಿ ಯು.ಪೂವಪ್ಪ ದೀಪ ಬೆಳಗಿಸಿ ಧಾರ್ಮಿಕ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಶಿಕ್ಷಣ ಪ್ರತೀ ಹಿಂದೂವಿನ ಮನೆಯಿಂದ ಆಗಬೇಕು. ದುರಾದೃಷ್ಟವಶಾತ್ ಸರಿಯಾದ ಬೋಧನೆಯ ಕೊರತೆಯಿಂದ ಧಾರ್ಮಿಕ ಶಿಕ್ಷಣ ಪಡೆಯುವಲ್ಲಿ ವಿಫಲವಾಗಿದ್ದೇವೆ. ಮಕ್ಕಳಲ್ಲಿ ಅತಿಯಾದ ಮೊಬೈಲ್‍ಚಟವೂ ಇದಕ್ಕೆ ಒಂದು ಕಾರಣವಾಗಿದೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳಿಗೆ ನಿತ್ಯಕರ್ಮಗಳನ್ನು ತಿಳಿಹೇಳಬೇಕು. ಆಗ ಧಾರ್ಮಿಕ ಶಿಕ್ಷಣದ ಕಡೆ ಮಕ್ಕಳು ಮುಖಮಾಡಲು ಸಾಧ್ಯ ಎಂದ ಅವರು, ಇದೀಗ ಧಾರ್ಮಿಕ ಶಿಕ್ಷಣ ಕೇಂದ್ರ ಶುಭ ಗಳಿಗೆಯಲ್ಲಿ ಉದ್ಘಾಟನೆಗೊಂಡಿದೆ. ಮಹಿಳೆಯರು ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗುವಂತಾಗಬೇಕು. ಇದಕ್ಕೆ ನನ್ನಿಂದಾದ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ ಎಂದರು.

ಸ್ಥಳೀಯ ನಗರಸಭೆ ಸದಸ್ಯ ಮನೋಹರ ಕಲ್ಲಾರೆ ಮಾತನಾಡಿ, ಧಾರ್ಮಿಕ ಶಿಕ್ಷಣ ಕೇಂದ್ರದ ಕುರಿತು ಕಲ್ಲಾರೆ ಯುವಕ ಮಂಡಲದವರು ಮನೆ ಮನೆ ತೆರಳಿ ಕರಪತ್ರಗಳನ್ನು ಹಂಚಿ ನಡೆಸುವ ಕುರಿತು ಯೋಚನೆಗಳನ್ನು ಹಾಕಿದ್ದೆವು. ಇದೀಗ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆಗೊಂಡಿದ್ದು, ನಮ್ಮ ಚಿಂತನೆಗೆ ಪುಷ್ಠಿ ನೀಡಿದೆ. ಈ ರೀತಿಯ ಕಾರ್ಯವನ್ನು ಮನೆಯಿಂದಲೇ ಆರಂಭಗೊಳಿಸಬೇಕು. ಆಗ ಅದಕ್ಕೆ ಅರ್ಥ ಬರುತ್ತದೆ ಎಂದರು.
ಮಂಗಳೂರು ವಿಭಾಗದ ದೇವಾಲಯ ಸಂವರ್ಧನ ಸಮಿತಿಯ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರ್ಮಿಕ ಶಿಕ್ಷಣ ಎಂಬುದು ಕೇವಲ ಪಠ್ಯಕ್ರಮ ಅಲ್ಲ. ಬದಲಾಗಿ ಅದೊಂದು ಜೀವನ ಕ್ರಮ. ಸನಾತನ ಧರ್ಮ ಮುಂದೆ ಬಂದರೆ ಭಾರತ ಜಗತ್ತಿನ ಗುರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಧಾರ್ಮಿಕ ಶಿಕ್ಷಣ ಪೂರಕವಾಗಿದೆ. ಇಂದು ಉದ್ಘಾಟನೆಗೊಂಡ 24ನೇ ಧಾರ್ಮಿಕ ಶಿಕ್ಷಣ ಕೇಂದ್ರ ಮಾದರಿ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕಿ ವತ್ಸಲಾರಾಜ್ಞಿ ಉಪಸ್ಥಿತರಿದ್ದರು. ಧಾರ್ಮಿಕ ಶಿಕ್ಷಣ ನಿರ್ವಾಹಕಿ ಕವಿತಾ ಕೊಳತ್ತಾಯ, ಬೋಧಕಿಯರಾದ ಪ್ರಭಾ, ಶಂಕರಿ ಶರ್ಮ ಅತಿಥಿಗಳನ್ನು ಗೌರವಿಸಿದರು. ಸುಪ್ರಜಾ ರಾವ್‍ಪ್ರಾರ್ಥನೆ ಹಾಡಿದರು. ಬೋಧಕಿ ಸುಮಂಗಲಾ ಗಿರೀಶ್‍ಸ್ವಾಗತಿಸಿದರು. ಬೋಧಕಿ ಉಮಾ ಡಿ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಬೋಧಕಿ ಕೃಷ್ಣವೇಣಿ ವಂದಿಸಿದರು. ಗೌರವ ಸಲಹೆಗಾರರಾದ ವೀಣಾ ಕೊಳತ್ತಾಯ, ಬೋಧಕಿ ಜಯಶ್ರೀ ಆರ್. ಭಟ್‍ಸಹಕರಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಶ್ಲೋಕ ಪಠಣ ನಡೆಯಿತು.