ಪುತ್ತೂರು: ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ, ನೋಡುಗರನ್ನು ಪ್ರೇಮ ಪ್ರೀತಿ ಭಾವನೆಗಳ ತೀರದುದ್ದಕ್ಕೂ ಕರೆದೊಯ್ಯುವ ವಿಶಿಷ್ಟ ಕಾಂಬಿನೇಷನ್ ಉಳ್ಳ ಸಿನಿಮಾ ““ಭಾವ ತೀರ ಯಾನ” ಪುತ್ತೂರಿನ ಜಿಎಲ್ ಒನ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಸಂಜೆ ಬಿಡುಗಡೆಗೊಂಡಿತು.
ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟರ್ನ್ ನ “ಭಾವ ತೀರ ಯಾನ” ಬಿಡುಗಡೆ ಸಮಾರಂಭವನ್ನು ಚಲನಚಿತ್ರ ಮತ್ತು ಧಾರವಾಹಿಗಳ ಅಭಿನೇತ್ರಿ ವಸಂತಲಕ್ಷ್ಮೀ ಶಶಿಧರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಲೆ ಮತ್ತು ಕಲಾವಿದನ ಭಾವನಾತ್ಮಕ ಸಂಬಂಧ ವಿಶಿಷ್ಟವಾದದ್ದು. ಭಾವನಾ ಜೀವಿಯಾದ ಕಲಾವಿದ ಒಳ್ಳೆಯ ಮನಸ್ಸಿನಿಂದ ಇರುತ್ತಾನೆ. ಕಲಾ ಆರಾಧಕ ಮನಸ್ಸಿನಿಂದ ಸಮಾಜಕ್ಕೆ ನೀಡುವ ಕೊಡುಗೆ ಎಲ್ಲರ ಗಮನ ಸೆಳೆಯುತ್ತದೆ. ಆತನಲ್ಲಿರುವ ಭಾವನೆ ಹೊರಜಗತ್ತಿಗೆ ಬಂದಾಗ ಆತ ನೀಡುವ ಕೊಡುಗೆ ಸಮಾಜಕ್ಕೆ ತಿಳಿಯುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಚಿಕ್ಕ ವಯಸ್ಸಿನಲ್ಲೇ ಆಳವಾದ ಜ್ಞಾನ ಪಡೆದ ಮಯೂರ ಅಂಬೆಕಲ್ಲು ಅವರು ಚಿತ್ರ ಕತೆ ಬರೆದು, ಸಂಗೀತ ನೀಡಿ ನಿರ್ದೇಶನ ಮಾಡಿದ “ಭಾವ ತೀರ ಯಾನ” ಸಿನೆಮಾ ಪ್ರೇಕ್ಷಕರ ಮನೆ ಗೆಲ್ಲುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸುಳ್ಯ ಭಾವನಾ ಬಳಗದ ಕೆ.ಆರ್.ಗೋಪಾಲಕೃಷ್ಣ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಸಿನೆಮಾ ನಿರ್ದೇಶನ ಮಾಡಿರುವ ಮಯೂರ ಅಂಬೆಕಲ್ಲು ಅವರು ಸಾಂಸ್ಕೃತಿಕ ರಾಯಭಾರಿಯಾಗಿ ರಾಷ್ಟ್ರಮಟ್ಟದಲ್ಲಿ ರಾರಾಜಿಸಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ಮಾತನಾಡಿ, ಕರಾವಳಿಯ ಅದರಲ್ಲೂ ಸುಳ್ಯದ ಪ್ರತಿಭೆ, ಚಿಕ್ಕವಯಸ್ಸಿನಲ್ಲೇ ಸಿನೆಮಾ ನಿರ್ದೇಶಿಸಿ ಸಾಧನೆ ಮಾಡಿದ್ದಾರೆ. ತನ್ನ ಕೆಲಸದ ಒತ್ತಡದ ನಡುವೆಯೂ ಬಿಡುವಿನ ವೇಳೆಯಲ್ಲಿ ಮಾಡಿದ ಈ ಸಾಧನೆ ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ಮುಂದಿನ ದಿನಗಳಲ್ಲಿ ಸುಳ್ಯದ ಅಂಬೆಕಲ್ಲು ಎಂಬ ಗ್ರಾಮೀಣ ಪ್ರದೇಶವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಲಿ. ಇಂತಹಾ ಹಲವಾರು ಸಿನೆಮಾಗಳನ್ನು ನಿರ್ಮಿಸಲು ಭಗವಂತ ಶಕ್ತಿ ನೀಡಲಿ ಎಂದು ಹಾರೈಸಿದರು.
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ಹರೀಶ್ ಉಬರಡ್ಕ, ಸುಶಾಂತ್ ಕೆಡೆಂಜಿ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸೀತಾರಾಮ ಕೇವಳ ಸ್ವಾಗತಿಸಿದರು. ನಿರ್ದೇಶಕ ನಾಗೇಶ್ ಕೆಡೆಂಜಿ ವಂದಿಸಿದರು. ನ್ಯೂಸ್ ಪುತ್ತೂರುನ ಸಿಬ್ಬಂದಿ ಧರ್ಮಶ್ರೀ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಎಲ್ ಒನ್ ಮಾಲ್ ನ ಸ್ಕ್ರೀನ್ -2 ನಲ್ಲಿ “ಭಾವ ತೀರ ಯಾನ” ಪ್ರದರ್ಶನ ನಡೆಯಿತು. ಕಿಕ್ಕಿರಿದು ತುಂಬಿದ ಪ್ರೇಕ್ಷಕರು ಇದಕ್ಕೆ ಸಾಕ್ಷಿಯಾದರು.