ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಕೃಪಾಂಕ ಸಿಗಲಿದೆ
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಂದಿದ್ದ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ವರ್ಷದಿಂದ ರದ್ದಾಗಿದ್ದು, 2024ಕ್ಕೂ ಹಿಂದೆ ಇದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ.35ಕ್ಕೆ ನಿಗದಿ ಮಾಡಲಾಗಿದೆ.
ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಗೆ ಅಡ್ಡಿಯಾಗಿದೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವಿವಿಧ ವಲಯಗಳಿಂದ ತೀವ್ರ ಟೀಕೆಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಸ್ ಅಂಕಗಳನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವೆಬ್ ಕಾಸ್ಟಿಂಗ್ ಕಣ್ಗಾವಲು ವ್ಯವಸ್ಥೆ ಜಾರಿಯಿಂದ ಕಳೆದ ಬಾರಿ ತೀವ್ರವಾಗಿ ಕುಸಿದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಜಾರಿಗೆ ತಂದಿದ್ದ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ಬಾರಿ ಇರುವುದಿಲ್ಲ. ಆದರೆ ಕೆಲವೇ ಅಂಕಗಳಿಂದ ಉತ್ತೀರ್ಣ ಅವಕಾಶ ತಪ್ಪುವ ಮಕ್ಕಳನ್ನು ಮೇಲೆತ್ತಲು ಈ ಹಿಂದೆ ಇದ್ದಂತೆ ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಗ್ರೇಸ್ ಅಂಕ ನೀಡುವ ಪದ್ಧತಿ ಮುಂದುವರಿಯಲಿದೆ. ಇದರಿಂದ ಕಳೆದ ಬಾರಿ ಒಟ್ಟಾರೆ ಶೇ.20ರಷ್ಟು ಗ್ರೇಸ್ ಅಂಕ ನೀಡಲು ಇದ್ದ ಅವಕಾಶ ಈಗ ಶೇ.10ಕ್ಕೆ ಸೀಮಿತವಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 35 ಅಂಕಗಳನ್ನು ಗಳಿಸಬೇಕು. ಇತರ ವಿಷಯಗಳಲ್ಲಿ ಲಿಖಿತ ಪರೀಕ್ಷೆಯಲ್ಲಿ 28 ಅಂಕಗಳನ್ನು ಪಡೆಯಬೇಕು. ಆಂತರಿಕ ಅಂಕಗಳ ಜೊತೆಗೆ, ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು 35 ಅಂಕಗಳನ್ನು ಗಳಿಸಬೇಕು. ವಿದ್ಯಾರ್ಥಿ ಮೂರು ವಿಷಯಗಳಲ್ಲಿ ಅನುತ್ತೀರ್ಣನಾದರೆ, 10 ಗ್ರೇಸ್ ಅಂಕಗಳನ್ನು ನೀಡುವ ಮೂಲಕ ಉತ್ತೀರ್ಣನಾಗಲು ಕನಿಷ್ಠ ಅಂಕಗಳನ್ನು (219) ದಾಟಿದರೆ, ಗ್ರೇಸ್ ಅಂಕಗಳನ್ನು ನೀಡಲಾಗುತ್ತದೆ.
ಅದೇ ರೀತಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದರೆ ಶೇ.5ರಷ್ಟು ಗ್ರೇಸ್ ಅಂಕಗಳನ್ನು ನೀಡುವ ಮೂಲಕ, ಕನಿಷ್ಠ ಉತ್ತೀರ್ಣ ಅಂಕಗಳನ್ನು (210) ದಾಟಿದರೆ, ಗ್ರೇಸ್ ಅಂಕಗಳನ್ನು ನೀಡಲಾಗುತ್ತದೆ. ಈ ಪದ್ಧತಿ ಮುಂದುವರಿಯುತ್ತದೆ ಎಂದು ಹೇಳಿದರು.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ದ್ವಿತೀಯ ಪಿಯುಸಿ ಮಾರ್ಚ್ 1 ರಿಂದ 20 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ. ಪಿಯುಸಿಗೆ 7,13,862 ವಿದ್ಯಾರ್ಥಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 5,050 ಕಾಲೇಜುಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 15,881 ಶಾಲೆಗಳು ನೋಂದಾಯಿಸಿಕೊಂಡಿವೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 1171 ಪರೀಕ್ಷಾ ಕೇಂದ್ರಗಳು, 2,342 ಸ್ಥಾನಿಕ ಜಾಗೃತ ದಳಗಳು, 504 ವಿಚಕ್ಷಣ ಜಾಗೃತ ದಳಗಳು, 365 ಪ್ರಶ್ನೆಪತ್ರಿಕಾ ವಿತರಣಾ ಮಾರ್ಗಗಳು, 1,171 ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪ/ಜಂಟಿ ಅಧೀಕ್ಷಕರು, ಉತ್ತರ ಪತ್ರಿಕೆಗಳ/ಪ್ರಶ್ನೆ ಪತ್ರಿಕೆಗಳ ಪಾಲಕರನ್ನು ನೇಮಿಸಲಾಗುತ್ತದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನ 76 ಕೇಂದ್ರಗಳಲ್ಲಿ ನಡೆಯಲಿದ್ದು, 31000 ಮೌಲ್ಯ ಮಾಪಕರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ 2,818 ಪರೀಕ್ಷಾ ಕೇಂದ್ರಗಳು ಹಾಗೂ ಸ್ಥಾನಿಕ ಜಾಗೃತ ಸ್ಥಳಗಳು ಇರಲಿವೆ. ಜಿಲ್ಲಾ ಹಂತದಲ್ಲಿ 410, ತಾಲೂಕು ಹಂತದಲ್ಲಿ 1,662, ವಿಚಕ್ಷಣ ಜಾಗೃತ ದಳಗಳು ಇರಲಿವೆ.
1,117 ಪ್ರಶ್ನೆ ಪತ್ರಿಕಾ ವಿತರಣಾ ಮಾರ್ಗಗಳ ಸಂಖ್ಯೆ ಇದ್ದು, 2,818 ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿರುತ್ತಾರೆ. ಉಪ/ಜಂಟಿ ಅಧೀಕ್ಷಕರ ಸಂಖ್ಯೆ 958 ಆಗಿದ್ದು 2818 ಉತ್ತರ ಪತ್ರಿಕೆಗಳ/ಪ್ರಶ್ನೆ ಪತ್ರಿಕೆಗಳ ಪಾಲಕರಿರುತ್ತಾರೆ. 240 ಕೇಂದ್ರದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು 65 ಸಾವಿರ ಮೌಲ್ಯ ಮಾಪಕರು ಮಾಡಲಿದ್ದಾರೆ ಎಂದು ಸಚಿವರು ವಿವರಿಸಿದರು.
ಹಿಜಾಬ್ ವಿಷಯ ನ್ಯಾಯಾಲಯದಲ್ಲಿರುವುದರಿಂದ ಯಾವುದೇ ನಿರ್ಧಾರ ಮಾಡಿಲ್ಲ. ಅನುದಾನಿತ ಶಿಕ್ಷಕರ ನೇಮಕಕ್ಕೆ, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗಿದೆ. 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದೆ. ಬಜೆಟ್‌ನಲ್ಲಿ 5 ಸಾವಿರ ಕೊಠಡಿಗೆ ಮತ್ತು ಶೌಚಾಲಯಗಳನ್ನು ನಿರ್ಮಿಸಲು ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.