ಪ್ರಚೋದನಕಾರಿ ಭಾಷಣ ಮಾಡಿ ಜನರನ್ನು ಕೆರಳಿಸಿದ್ದ ಮೌಲ್ವಿ
ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಗಲಾಟೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮೌಲ್ವಿ ಮುಫ್ತಿ ಮುಸ್ತಾಕ್‌ನನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಗುರುವಾರ ಮೌಲ್ವಿ ಮುಫ್ತಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ, ಗಲಾಟೆ ನಡೆದು 11 ದಿನಗಳ ಬಳಿಕ ಆರೋಪಿ ಮೌಲ್ವಿಯನ್ನು ಬಂಧಿಸಿದಂತಾಗಿದೆ. ಮೌಲ್ವಿಯನ್ನು ಬಂಧಿಸುವ ವಿಚಾರದಲ್ಲಿ ಸಾರ್ವಜನಿಕರ ಹಾಗೂ ಪ್ರತಿಪಕ್ಷಗಳ ಒತ್ತಡ ಹೆಚ್ಚಾಗಿತ್ತು. ಇದೀಗ ಕೊನೆಗೂ ಆತನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲ್ಲು ತೂರಾಟ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸದೆ ಇರುವ ಸರ್ಕಾರದ ನಡೆಯನ್ನು ಖಂಡಿಸಿದ್ದ ಬಿಜೆಪಿ ನಾಯಕ ಪ್ರತಾಪ್ ಸಿಂಹ, ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ತಾಲಿಬಾನಿಗೆ ಹೋಲಿಸಿದ್ದರು. ಮುಸ್ಲಿಮರು ಭದ್ರತೆ ಕೇಳಿದರೆ ಸರ್ಕಾರ ನೀಡಲಿ, ಯಾರು ಬೇಡವೆನ್ನುತ್ತಾರೆ? ಅದರೆ ಅವರು ದುಷ್ಕೃತ್ಯ ಎಸಗಿದಾಗ ಬಂಧಿಸಿ ದಂಡಿಸುವುದನ್ನು ಬಿಟ್ಟು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಅವರನ್ನು ತಡೆಯುವುದು ಹೇಗೆ? ಅವರಿಗೆ ಹೆದರಿ ಹಿಂದೂಗಳು ಮನೆ ಬಿಟ್ಟು ಬೇರೆ ಕಡೆ ಹೋಗಬೇಕೆ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. ಸಿಟಿ ರವಿ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಂತರ ಯುವಕನೋರ್ವ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಗಲಭೆಗೆ ನಾಂದಿ ಹಾಡಿತ್ತು. ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರ ಹಾಕಿ ವ್ಯಂಗ್ಯದ ಸಂದೇಶ ಪ್ರಕಟಿಸಿದ್ದ ಯುವಕ, ಅದರ ಜತೆಗೆ ಧರ್ಮವೊಂದಕ್ಕೆ ಅವಹೇಳನವಾಗುವಂಥ ಸಂದೇಶ ಪ್ರಕಟಿಸಿದ್ದ. ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಠಾಣೆ ಮುಂದೆ ಜಮಾಯಿಸಿದ್ದ ಗುಂಪೊಂದು ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸ್ ವಾಹನ, ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು. ಘಟನೆಯ ಭಯಾನಕ ಸಿಸಿಟಿವಿ ದೃಶ್ಯಗಳು ನಂತರ ವೈರಲ್ ಆಗಿದ್ದವು. ಕಲ್ಲು ತೂರಾಟಕ್ಕೆ ಪ್ರಚೋದನೆ ನೀಡಿದ ಆರೋಪ ಮೌಲ್ವಿ ಮುಫ್ತಿ ಮುಸ್ತಾಕ್ ಮೇಲಿದೆ.