90 ಸಾವಿರ ಕೈದಿಗಳಿಗಾಗಿ ಜೈಲಿಗೆ ಹರಿಯಲಿದೆ ತ್ರಿವೇಣಿ ಸಂಗಮದ ಜಲ
ಪ್ರಯಾಗ್‌ರಾಜ್: ಉತ್ತರ ಪ್ರದೇಶ ಸರ್ಕಾರ ರಾಜ್ಯದ ವಿವಿಧ ಜೈಲುಗಳಲ್ಲಿ ಸೆರೆವಾಸದಲ್ಲಿರುವ ಕೈದಿಗಳಿಗೂ ಪವಿತ್ರ ಸ್ನಾನ ಮಾಡುವ ಅವಕಾಶ ಕಲ್ಪಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಕೈದಿಗಳಿಗೂ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಅವಕಾಶ ನೀಡಲಿದೆ.
ಉತ್ತರ ಪ್ರದೇಶದ ಜೈಲು ಆಡಳಿತ ರಾಜ್ಯದಲ್ಲಿರುವ 75 ಜೈಲುಗಳಿಗೆ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ತರಲು ವ್ಯವಸ್ಥೆ ಮಾಡುತ್ತಿದೆ. ಉತ್ತರ ಪ್ರದೇಶದ ಸಚಿವ ದಾರಾ ಸಿಂಗ್ ಚೌಹಾಣ್ ಅವರ ಕಚೇರಿಯು ಈ ಮಾಹಿತಿ ನೀಡಿದೆ. ಫೆಬ್ರವರಿ 21ರಂದು ಎಲ್ಲ ಜೈಲುಗಳಲ್ಲಿ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಈ ಪವಿತ್ರ ಸ್ನಾನದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದೆ.
ಉತ್ತರಪ್ರದೇಶದ ರಾಜ್ಯದಾದ್ಯಂತ ಏಳು ಕೇಂದ್ರ ಕಾರಾಗೃಹಗಳು ಸೇರಿದಂತೆ ಒಟ್ಟು 75 ಜೈಲುಗಳಲ್ಲಿ 90,000ಕ್ಕೂ ಹೆಚ್ಚು ಕೈದಿಗಳಿದ್ದಾರೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾರಾಗೃಹ ಸಚಿವರ ಸೂಚನೆ ಮೇರೆಗೆ ಕೈದಿಗಳಿಗೆ ಮಹಾಕುಂಭ ಮೇಳದ ಪವಿತ್ರ ಸ್ನಾನದ ವ್ಯವಸ್ಥೆ ಮಾಡಲಿದ್ದೇವೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ.
ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದ ಪವಿತ್ರ ನೀರನ್ನು ಎಲ್ಲಾ ಜೈಲುಗಳಿಗೆ ತಂದು ಸಾಮಾನ್ಯ ನೀರಿನೊಂದಿಗೆ ಸೇರಿಸಲಾಗುತ್ತದೆ. ಜೈಲು ಆವರಣದಲ್ಲಿರುವ ಸಣ್ಣ ತೊಟ್ಟಿಯಲ್ಲಿ ಈ ನೀರನ್ನು ಸಂಗ್ರಹಿಸಲಾಗುತ್ತದೆ. ಎಲ್ಲ ಕೈದಿಗಳು ಪ್ರಾರ್ಥನೆಯ ನಂತರ ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ ಎಂದು ಪ್ರಕ್ರಿಯೆ ವಿವರಿಸಿದ್ದಾರೆ. ಲಖನೌ ಜೈಲಿನಲ್ಲಿ ನಡೆಯಲಿರುವ ಪವಿತ್ರ ಸ್ನಾನದ ಕಾರ್ಯಕ್ರಮದಲ್ಲಿ ಸಚಿವ ಚೌಹಾಣ್ ಹಾಗೂ ಹಿರಿಯ ಜೈಲು ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗರಾಜ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಸುಮಾರು 1,350 ಕೈದಿಗಳು ಪವಿತ್ರ ಸ್ನಾನ ಮಾಡಲು ಸಜ್ಜಾಗಿದ್ದಾರೆ. ಅವರ ಬಂಧನದ ಹೊರತಾಗಿಯೂ ಕುಂಭಮೇಳದಲ್ಲಿ ಭಾಗವಹಿಸಲು ಅವಕಾಶ ಪಡೆಯುತ್ತಿದ್ದಾರೆ ಎಂದು ಪ್ರಯಾಗರಾಜ್ ಜಿಲ್ಲಾ ಕಾರಾಗೃಹದ ಹಿರಿಯ ಅಧೀಕ್ಷಕ ಅಮಿತಾ ದುಬೆ ಹೇಳಿದ್ದಾರೆ. ಉನ್ನಾವೋ ಜೈಲಿನಲ್ಲಿ ಈಗಾಗಲೇ ಒಂದು ಬಾರಿ ಕೈದಿಗಳಿಗೆ ಪವಿತ್ರ ನೀರಿನಿಂದ ಸ್ನಾನ ಮಾಡುವ ಅವಕಾಶ ನೀಡಲಾಗಿದೆ. ಈಗ ಫೆಬ್ರವರಿ 21ರಂದು ಅವರಿಗೆ ಎರಡನೇ ಬಾರಿ ಪವಿತ್ರ ಸ್ನಾನ ಮಾಡುವ ಅವಕಾಶ ಸಿಗಲಿದೆ. ಜೈಲು ಆಡಳಿತವು ಇಲ್ಲಿನ ಕೈದಿಗಳಿಗೆ ಮತ್ತೊಮ್ಮೆ ಪವಿತ್ರ ಸ್ನಾನದ ವ್ಯವಸ್ಥೆ ಮಾಡುತ್ತಿದೆ. ಈಗಾಗಲೇ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ 55.56 ಕೋಟಿ ದಾಟಿದೆ ಎಂದು ಉತ್ತರಪ್ರದೇಶದ ಮಾಹಿತಿ ಇಲಾಖೆ ತಿಳಿಸಿದೆ.