ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಹಾಗೂ ಶ್ರೀ ಸಂತ ಕವಿ ಸರ್ವಜ್ವ ಜಯಂತಿ ಆಚರಣೆ ಪುತ್ತೂರು ಮಿನಿ ವಿಧಾನಸೌಧದದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ದೀಪ ಪ್ರಜ್ವಲನೆ ಮಾಡಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಸಹಾಯ ಉಪವಿಭಾಗ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ದೇಶಕ್ಕೆ ಉತ್ತಮ ಸಂದೇಶ ನೀಡಿ, ಉತ್ತಮ ಆಡಳಿತ ನಡೆಸಿದ ಛತ್ರಪತಿ ಶಿವಾಜಿ ಹಾಗೂ ತನ್ನ ವಚನಗಳಿಂದ ಆಗು ಹೋಗುಗಳ ಕುರಿತು ನೀಡಿದ ಕೊಡುಗೆ ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಅವರಿಬ್ಬರ ಕುರಿತು ಮುಂದಿನ ಪೀಳಿಗೆ ಓದಿ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು, ಜೀಜಾಬಾಯಿ ತನ್ನ ಮಗ ಛತ್ರಪತಿ ಶಿವಾಜಿ ಗರ್ಭದಲ್ಲಿರುವಾಗಲೇ ಉತ್ತಮ ಆಡಳಿತಗಾರನಾಗಿ ಬೆಳೆಯುವಲ್ಲಿ ಪ್ರೋತ್ಸಾಹ ನೀಡಿದಂತೆ ಮಕ್ಕಳಿಗೆ ತನ್ನ ಸ್ವಂತ ಕಾಲಲ್ಲೇ ಹೇಗೆ ತನ್ನ ಗುರಿ ಮುಟ್ಟಿ ತಾನು ಬೆಳೆಯುವುದರ ಜತೆಗೆ ಸಮಾಜಕ್ಕೆ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಹೆತ್ತವರು ಪ್ರೋತ್ಸಾಹ ನೀಡಬೇಕು. ಸರಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಬರುವ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.
ನಿವೃತ್ತ ಶಿಕ್ಷಕಿ ಶುಭಲತಾ ಹಾರಾಡಿ ಸಂಸ್ಮರಣಾ ಉಪನ್ಯಾಸ ನೀಡಿ, ಸರ್ವಜ್ಞನಂತೆ ಪ್ರಪಂಚದ ಭೌತಿಕ ಜ್ಞಾನದ ಜತೆ ತಮ್ಮೊಳಗೆ ಏನಿದೆ ಎಂಬುದರ ಅರಿವು ಇರಬೇಕು. ಸಂತಕವಿ ಸರ್ವಜ್ಞ ಶ್ರೇಷ್ಠ ಕವಿಯಾಗಿದ್ದು, ಅವರ ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಈ ನಿಟ್ಟಿನಲ್ಲಿ ಸರ್ವಜ್ಞನ ಕುರಿತು ಆಳವಾದ ಚಿಂತನೆ ನಡೆಸಬೇಕಾಗಿದೆ. ಸರ್ವಜ್ಞನ ನೆನಪು ಸದಾ ಇರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇರಬೇಕು ಎಂದ ಅವರು, ಅಪ್ರತಿಮ ಸಾಹಸಿ ಶಿವಾಜಿ ಸ್ವರಾಜ್ಯದ ಕನಸು ಕಟ್ಟಿ ನನಸಾಗಿಸಿದವರು. ಶಿವಾಜಿ ತಾಯಿ ಜೀಜಾಬಾಯಿ ಭಾರತದ ಎಲ್ಲಾ ತಾಯಂದಿರಿಗೆ ಪ್ರೇರಣೆ. ಈ ನಿಟ್ಟಿನಲ್ಲೇ ಭಾರತೀಯರ ಹೃದಯದಲ್ಲಿ ಸ್ಥಾಪಿತವಾಗಿದ್ದಾರೆ. ಶಿವಾಜಿ ಮಹಾರಾಜರು ಯಾವುದೇ ಅಧಿಕಾರದ ಆಸೆಗೆ ಅಂಟಿಕೊಳ್ಳದೆ ಚಾಕಚಕ್ಯತೆಯಿಂದ ಎಲ್ಲರೂ ಮೆಚ್ಚುವ ಆಡಳಿತ ನಡೆಸಿದವರು. ಅಂದು ದೇಶದವನ್ನು ಕಾಪಾಡುವಲ್ಲಿ ಧ್ರುವತಾರೆಯಾಗಿ ಹುಟ್ಟಿ ಬಂದವರು. ಶತ್ರುಗಳನ್ನು ಉಪಾಯದಿಂದ ಹೇಗೆ ಮಟ್ಟಹಾಗಬಹುದು ಎಂಬುದಕ್ಕೆ ಶಿವಾಜಿಯವರ ಆಡಳಿತ ನಮಗೆ ಪ್ರೇರಣೆ. ಶಿವಾಜಿಯಂತವರು ಮತ್ತಷ್ಟು ಮಂದಿ ಹುಟ್ಟಿ ಬರಲಿ ಎಂದರು.
ಸಮಾರಂಭದಲ್ಲಿ ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಲೂಕು ಕಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ದಯಾನಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಮಾರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.