26 ಕಿ.ಮೀ. ಯೋಜನೆಯಲ್ಲಿ 3.8 ಕಿ.ಮೀ. ಸುರಂಗ
ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ಮಾರ್ಗ ನಿರ್ಮಾಣ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸುರಂಗ ಮಾರ್ಗ ಕಾರ್ಯಸಾಧುವಲ್ಲ, ಇದಕ್ಕೆ ಭಾರಿ ಮೊತ್ತ ಬೇಕಾಗುತ್ತದೆ ಎಂದು ತಿರಸ್ಕರಿಸಿದ್ದರು. ಆದರೆ ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಹಾಸನ ಜಿಲ್ಲೆಯ ಮಲೆನಾಡು ಭಾಗದ ಶಾಸಕರು ಮತ್ತು ಋಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಇದೀಗ ಒಪ್ಪಿಗೆ ಸಿಕ್ಕಿದೆ. ಆದರೆ ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಒಟ್ಟು 26 ಕಿ.ಮೀ ಉದ್ದದ ಯೋಜನೆ ಇದಾಗಿದ್ದು, 3.8 ಕಿ.ಮೀ ಸುರಂಗ ಇದ್ದರೆ, 10 ಕಿ.ಮೀ ರಸ್ತೆ ಇರಲಿದೆ. ಮಾರನಹಳ್ಳಿಯಿಂದ ಪ್ರಾರಂಭವಾಗಿ ಅಡ್ಡಹೊಳೆಯವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ.
ಇಲ್ಲಿ ಅರಣ್ಯಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ವಿವರವಾದ ಅಂದಾಜು ಮಾಡಬೇಕಿದೆ. ಕೆಲವು ಕಡೆಗಳಲ್ಲಿ ಫ್ಲೈ ಓವರ್‌ಗಳ ನಿರ್ಮಾಣ ಕೂಡ ಆಗಬೇಕಿದೆ. ಇದಕ್ಕೆ ದುಬಾರಿ ವೆಚ್ಚವಾಗುವುದರಿಂದ ಇದನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಭೂಸ್ವಾಧೀನ ಜವಾಬ್ದಾರಿ ಕೂಡ ರಾಜ್ಯ ಸರ್ಕಾರ ಹೆಗಲಿಗೆ ಬೀಳಲಿದೆ. ರಾಜ್ಯ ಸರ್ಕಾರ ಅಲ್ಪಪ್ರಮಾಣದ ಅರಣ್ಯ ಭೂಮಿ ನೀಡಲು ಸಿದ್ಧವಿದ್ದರೆ ಶಿರಾಡಿಘಾಟ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಣ ಹೂಡಿಕೆ ಮಾಡಲು ತಮ್ಮ ಇಲಾಖೆ ಪರಿಗಣಿಸಲಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ಸಕಲೇಶಪುರದಿಂದ ಗುಂಡ್ಯದವರೆಗೆ ಚತುಷ್ಪಥ ರಸ್ತೆ ಮಾಡಲು ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ.
ರಸ್ತೆ ವಿಸ್ತರಣೆ ಮಾಡಲು ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಮುಂದೆ ಭಾರಿ ಅನಾಹುತ ಆಗಲಿದೆ ಎನ್ನುವ ಕಾರಣಕ್ಕೆ ಸುರಂಗ ಯೋಜನೆಯೇ ಉತ್ತಮ ಎಂದು ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ಗುಡ್ಡಗಳನ್ನು ಕತ್ತರಿಸಿ ರಸ್ತೆ ವಿಸ್ತರಣೆ ಮಾಡಿರುವುದರಿಂದ ಮಳೆಗಾಲದಲ್ಲಿ ಭೂಕುಸಿತ ಉಂಟಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸುರಂಗ ಮಾರ್ಗ ನಿರ್ಮಾಣ ಮಾಡಿದರೆ ಪಶ್ಚಿಮಘಟ್ಟದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಇದನ್ನು ಲೆಕ್ಕಿಸದೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತಂದು ಸುರಂಗ ಮಾರ್ಗ ಮಾಡಲು ಮುಂದಾಗಿದೆ.
ಪಶ್ಚಿಮಘಟ್ಟದಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಜೀವ ವೈವಿಧ್ಯತೆ ಮೇಲೆ ಮಾರಕ ಪರಿಣಾಮ ಬೀರಬಹುದು ಎನ್ನುವುದು ಪರಿಸರವಾದಿಗಳು ಹಾಗೂ ಮಲೆನಾಡು ಭಾಗದ ಜನರ ಆತಂಕವಾಗಿದೆ. ರಸ್ತೆ ಅಗಲೀಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ, ಸುರಂಗ ಮಾರ್ಗ ಸ್ವಲ್ಪಮಟ್ಟಿಗೆ ಕಡಿಮೆ ಹಾನಿ ಮಾಡಬಹುದು ಎಂದು ಸರ್ಕಾರ ಬಿಂಬಿಸುತ್ತಿದ್ದರೂ ಪರಿಸರವಾದಿಗಳು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸುರಂಗ ಯೋಜನೆಯ ಪರ ಮತ್ತು ವಿರುದ್ಧವಾಗಿಯೂ ಚರ್ಚೆಗಳು ಮುನ್ನೆಲೆಗೆ ಬಂದಿವೆ.