ಇಂದು ಹೊಸದಿಲ್ಲಿಯಲ್ಲಿ ಆರ್‌ಎಸ್‌ಎಸ್‌ ಕಚೇರಿ ಕೇಶವ ಕುಂಜ್‌ ಲೋಕಾರ್ಪಣೆ

13 ಅಂತಸ್ತಿನ ಮೂರು ಕಟ್ಟಡಗಳು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ

ಹೊಸದಿಲ್ಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹೊಸ ಕಚೇರಿ ರಾಷ್ಟ್ರ ರಾಜಧಾನಿಯಲ್ಲಿ ಇಂದು ಉದ್ಘಾಟನೆಗೊಳ್ಳಲಿದೆ. ಈ ಹಿಂದಿದ್ದ ಕಚೇರಿ ಸ್ಥಳದಲ್ಲೇ ಹೊಸ ಕಚೇರಿ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಶಿವಾಜಿ ಜಯಂತಿ ದಿನವಾದ ಇಂದು 150 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಟ್ಟಡವನ್ನು ʼಕೇಶವ ಕುಂಜ್ʼ ಎಂದು ಕರೆಯಲಾಗುತ್ತದೆ. ಕಟ್ಟಡದ ಸಂಕೀರ್ಣವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಡಾ.ಮೋಹನ್‌ ಭಾಗವತ್‌ ಉದ್ಘಾಟಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಲಿದ್ದಾರೆ.

3.75 ಎಕರೆ ಜಾಗದಲ್ಲಿ ತಲಾ ಹದಿಮೂರು ಅಂತಸ್ತಿನ ಮೂರು ಕಟ್ಟಡಗಳು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, 300 ಕೊಠಡಿಗಳನ್ನು ಒಳಗೊಂಡಿವೆ. ಈ ಕಟ್ಟಡಗಳಿಗೆ ಸಾಧನ, ಪ್ರೇರಣಾ ಮತ್ತು ಅರ್ಚನಾ ಎಂದು ಹೆಸರಿಸಲಾಗಿದೆ. ಹಿಂದುತ್ವ ಸಿದ್ಧಾಂತದ ಬಗ್ಗೆ ಒಲವು ಹೊಂದಿರುವ 75,000ಕ್ಕೂ ಹೆಚ್ಚು ಜನರ ದೇಣಿಗೆಯಿಂದ ಈ ಕಟ್ಟಡವನ್ನು ನಿರ್ಮಿಸಲಾಗಿದೆ.

































 
 

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನವೆಂಬರ್ 2016ರಲ್ಲಿ ಯೋಜನೆಗೆ ಅಡಿಪಾಯ ಹಾಕಿದ್ದರು. ಆದರೆ ಕೋವಿಡ್‌ನಿಂದಾಗಿ ಕೆಲಸ ವಿಳಂಬವಾಯಿತು. ಕಟ್ಟಡ ಮೂರು ಗೋಪುರಗಳನ್ನು ಹೊಂದಿದ್ದು, ಪ್ರತಿ ಗೋಪುರ ನೆಲ ಮಹಡಿ ಮತ್ತು 12 ಹೆಚ್ಚುವರಿ ಮಹಡಿಗಳನ್ನು ಹೊಂದಿದೆ. ಕೇಶವ ಕುಂಜ್‌ನಲ್ಲಿ ಒಟ್ಟು 13 ಲಿಫ್ಟ್‌ಗಳಿದ್ದು, ಮೊದಲ ಮತ್ತು ಎರಡನೇ ಗೋಪುರಗಳಲ್ಲಿ ಐದು ಮತ್ತು ಮೂರನೇ ಗೋಪುರದಲ್ಲಿ ಮೂರು ಇವೆ. ಪ್ರತಿ ಗೋಪುರದಲ್ಲಿ ಸೇವಾ ಲಿಫ್ಟ್ ಕೂಡ ಇದೆ.
ಹೊಸ ಪ್ರಧಾನ ಕಚೇರಿಯನ್ನು ಗುಜರಾತ್ ಮೂಲದ ವಾಸ್ತುಶಿಲ್ಪಿ ಅನೂಪ್ ಡೇವ್ ವಿನ್ಯಾಸಗೊಳಿಸಿದ್ದಾರೆ. ಎರಡನೇ ಮತ್ತು ಮೂರನೇ ಗೋಪುರಗಳ ನಡುವೆ ಒಂದು ದೊಡ್ಡ ತೆರೆದ ಸ್ಥಳವಿದೆ, ಅಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಪ್ರದೇಶವನ್ನು ‘ಸಂಘ ಸ್ಥಾನ’ (ಆರ್‌ಎಸ್‌ಎಸ್ ಸ್ಥಳ) ಎಂದು ಕರೆಯಲಾಗುತ್ತದೆ. ವಿಶ್ವ ಹಿಂದೂ ಪರಿಷತ್‌ನ ಪ್ರಮುಖ ನಾಯಕ ಅಶೋಕ್ ಸಿಂಘಾಲ್ ಅವರ ಹೆಸರಿನ ದೊಡ್ಡ ಸಭಾಂಗಣವನ್ನು ಹೊಂದಿದೆ. ಕಟ್ಟಡದಲ್ಲಿ ಗ್ರಂಥಾಲಯ, ಆರೋಗ್ಯ ಚಿಕಿತ್ಸಾಲಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕದಂತಹ ಸೌಲಭ್ಯಗಳನ್ನು ಹೊಂದಿರುತ್ತದೆ. ಕಟ್ಟಡದಲ್ಲಿ ಸೌರಶಕ್ತಿಯನ್ನು ಸಹ ಬಳಸಲಾಗುತ್ತಿದೆ.

ಆರ್‌ಎಸ್‌ಎಸ್‌ನ ಪ್ರಕಟಣೆಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್‌ನ ಕಚೇರಿಗಳು ಹಾಗೂ ಸುರುಚಿ ಪಬ್ಲಿಕೇಷನ್‌ ಸಹ ಇದೇ ಕಟ್ಟದಲ್ಲಿ ಇರಲಿವೆ. ಕೇಶವ್ ಕುಂಜ್‌ನ ಎರಡು ಮಹಡಿಗಳನ್ನು ಆರ್‌ಎಸ್‌ಎಸ್ ದಿಲ್ಲಿ ಘಟಕಕ್ಕೆ ಮೀಸಲಿಡಲಾಗುವುದು ಮತ್ತು ಒಂದು ಮಹಡಿಯನ್ನು ವಿಶಾವ್ ಕೇಂದ್ರಕ್ಕೆ ಮೀಸಲಿಡಲಾಗುವುದು. ಸಂಕೀರ್ಣದಲ್ಲಿ ಐದು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆ ಸಹ ಇದೆ, ದೈಹಿಕ ಸದೃಢತೆಗಾಗಿ ಯೋಗ ಕೊಠಡಿ ಮತ್ತು ಆಧುನಿಕ ವ್ಯಾಯಾಮ ಉಪಕರಣಗಳು ಸಹ ಲಭ್ಯವಿರುತ್ತವೆ. ವಿಶ್ರಾಂತಿಗಾಗಿ ದೊಡ್ಡ ಹುಲ್ಲುಹಾಸುಗಳು ಮತ್ತು ಹನುಮಾನ್ ದೇವಾಲಯವನ್ನು ಸಹ ಹೊಂದಿದೆ.

ಈ ಸಂಕೀರ್ಣವು ಪ್ರಸ್ತುತ 135 ಕಾರುಗಳಿಗೆ ಪಾರ್ಕಿಂಗ್ ಸ್ಥಳವನ್ನು ಹೊಂದಿದ್ದು, ಶೀಘ್ರದಲ್ಲೇ ಇದರ ಸಾಮರ್ಥ್ಯವನ್ನು 270ಕ್ಕೆ ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 1,300ಕ್ಕೂ ಹೆಚ್ಚು ಜನರು ಆಸೀನರಾಗುವಷ್ಟು ಸಾಮರ್ಥ್ಯವಿರುವ ಮೂರು ದೊಡ್ಡ ಸಭಾಂಗಣಗಳಿವೆ. ಏಕಕಾಲದಲ್ಲಿ 100ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಸುಸಜ್ಜಿತ ಭೋಜನಾಲಯವನ್ನೂ ಈ ಕಟ್ಟಡ ಒಳಗೊಂಡಿದೆ. ಕೇಶವ ಪುಸ್ತಕಾಲಯ ಗ್ರಂಥಾಲಯದಲ್ಲಿ 8,500ಕ್ಕೂ ಹೆಚ್ಚು ಪುಸ್ತಕಗಳಿವೆ. ಬೌದ್ಧ ಮತ್ತು ಸಿಖ್ ವಿಚಾರಗಳಿಂದ ಹಿಡಿದು ಕ್ರಿಶ್ಚಿಯನ್ ಮತ್ತು ಇಸ್ಲಾಮಿಕ್ ಅಧ್ಯಯನಗಳವರೆಗೆ ಹಲವಾರು ಸೈದ್ಧಾಂತಿಕ ಪಠ್ಯಗಳನ್ನೊಳಗೊಂಡ ಪುಸ್ತಕಗಳು ಈ ಗ್ರಂಥಾಲಯದಲ್ಲಿವೆ. ಗ್ರಂಥಾಲಯವು ಸಾರ್ವಜನಿಕರಿಗೆ ಮುಕ್ತವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top