ಮಾಜಿ ಪ್ರಧಾನಿ ಅಟಲ್‍ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ | ಬಿಜೆಪಿಯಿಂದ ಜಿ.ಎಲ್‍.ಬಲರಾಮ ಆಚಾರ್ಯ, ಡಾ.ಎಂ.ಕೆ.ಪ್ರಸಾದ್, ಮುರಳೀಧರ ಅವರ ಮನೆಗೆ ತೆರಳಿ ಸನ್ಮಾನ

ಪುತ್ತೂರು: ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿಯಿಂದ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ವಾಜಪೇಯಿಯವರು ಪುತ್ತೂರಿನಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿದ ಮತ್ತು ವಾಜಪೇಯಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮನೆಗೆ ತೆರಳಿ ಮನೆ ಮಂದಿಯನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮಕ್ಕೆ ನಡೆಯುತ್ತಿದೆ.

1991 ರಲ್ಲಿ ಪುತ್ತೂರಿನಲ್ಲಿ ವಾಜಪೇಯಿ ಬಂದಾಗ ಅವರನ್ನು ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿ ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದ ಜಿ.ಎಲ್.ಬಲರಾಮ ಅಚಾರ್ಯ ಅವರನ್ನು ಅವರ ಕೊಂಬೆಟ್ಟು ನಿವಾಸದಲ್ಲಿ, 1981 ರಲ್ಲಿ ವಾಜಪೇಯಿ ಅವರು ಪುತ್ತೂರಿನಲ್ಲಿ ಸಂಜೀವ ಶೆಟ್ಟಿಯವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ನೆನಪಿನಲ್ಲಿ ಮತ್ತು ಅವರ ಜೊತೆ ಮಂಗಳೂರಿಗೆ ಕಾರಿನಲ್ಲಿ ಜೊತೆಯಾಗಿ ಹೋದ ಸಂಜೀವ ಶೆಟ್ಟಿಯವರ ಹಿರಿಯ ಪುತ್ರ ಮುರಳಿಧರ ಶೆಟ್ಟಿಯವರನ್ನು ಹಾಗು ಪುತ್ತೂರಿನಲ್ಲಿ ನಡೆದ ವಾಜಪೇಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಎಂ.ಕೆ.ಪ್ರಸಾದ್ ಅವರನ್ನು ಅವರ ನಿವಾಸದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. 

ಸನ್ಮಾನ ಸ್ವೀಕರಿಸಿದ ಸ್ವರ್ಣೋದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ, ಪುತ್ತೂರಿನಲ್ಲಿ 1991 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾರ್ಯಕ್ರಮದ ವೇಳೆ ನಮ್ಮ ಕಾಂಪ್ಲೆಕ್ಸ್ ಬಳಿಯೇ ಅವರನ್ನು ನಾನು ಸ್ವಾಗತಿಸಿದ್ದೆ ಎಂದು ಹಿಂದಿನ ನೆನಪನ್ನು ತಿಳಿಸಿದರು.

































 
 

ಸನ್ಮಾನ ಸ್ವೀಕರಿಸಿದ ಮುರಳೀಧರ ಮಾತನಾಡಿ, ವಾಜಪೇಯಿ ಅಜಾತ ಶತ್ರು. ಯಾವುದೇ ರಾಜಕೀಯ ಪಕ್ಷಗಳಾಗಲಿ, ಯಾವುದೇ ಸಂಘಟನೆಗಳಾಗಲಿ ಅವರನ್ನು ವಿರೋಧಿಸಿಲ್ಲ. ವಾಜಪೇಯಿ ಅವರು ಕೂಡಾ ಯಾರನ್ನೂ ವಿರೋಧಿಸಿಲ್ಲ. ಅವರು ನಮ್ಮ ಮನೆಗೆ 1981 ರಲ್ಲಿ ಬಂದಿರುವುದು ಭಾಗ್ಯ. ಅವರೊಂದು ಸ್ವಾಮೀಜಿಯವರಂತೆ. ಅವರು ಮನೆಗೆ ಬಂದಾಗ ನನ್ನ ತಂದೆಯವರು ಅವರಿಗೆ ಸನ್ಮಾನ ಮಾಡಿರುವುದು ಮನದಲ್ಲಿ ಈಗಲೂ ಇದೆ. ಅವತ್ತು ಅವರು ಮಂಗಳೂರಿಗೆ ಹೋಗುವಾಗ ನಾನು ಕೂಡಾ ಜೊತೆಗೆ ಹೋಗಿದ್ದೆ ಎಂದು ವಾಜಪೇಯಿ ಅವರೊಂದಿಗೆ ನೆನಪನ್ನು ಹೇಳಿದ ಅವರು ಪುತ್ತೂರಿನಲ್ಲಿ ಕೆಲವು ಮನೆಗಳನ್ನು ಸಂಘದ ಮನೆ ಎಂದು ಕರೆಯುತ್ತಾರೆ ಇಂತಹ ವಿಚಾರ ಸಂತೋಷ ಆಗುತ್ತಿದೆ ಎಂದರು.

ಸನ್ಮಾನ ಸ್ವೀಕರಿಸಿದ ಡಾ.ಎಂ.ಕೆ.ಪ್ರಸಾದ್ ಮಾತನಾಡಿ, ವಾಜಪೇಯಿ ಅವರ ಪುತ್ತೂರಿನಲ್ಲಿ ಕಾರ್ಯಕ್ರಮಕ್ಕೆ ನಾನೆ ಅಧ್ಯಕ್ಷನಾಗಿದ್ದೆ. ಅವರಿಗೆ ನೀಡಿದ ನಿಧಿ ಸಮರ್ಪಣೆಯ ಹಣವನ್ನು ಪುನಃ ಪಕ್ಷದ ಖರ್ಚಿಗೆಂದು ಹಿಂದಿರುಗಿಸಿದ್ದರು. ಅದು ಅವರ ದೊಡ್ಡ ಗುಣ. ಕಾರ್ಯಕ್ರಮ ಮುಗಿದ ಬಳಿಕ ಅವರೊಂದಿಗೆ ಸುಳ್ಯದ ತನಕ ಕಾರಿನಲ್ಲಿ ಹೋಗಿದ್ದೆ ಎಂದ ಅವರು ಹಿಂದಿನ ನನೆಪನ್ನು ಮಾಡಿದರು. ರಾಜಕಾರಣದಲ್ಲಿ ಸ್ವಾರ್ಥ ತುಂಬಿದೆ. ಆದರೆ ಸ್ವಾರ್ಥವಿಲ್ಲದ ರಾಜಕಾರಣಕ್ಕೆ ವಾಜಪೇಯಿ ಅವರು ಮಾದರಿ. 23 ಪಕ್ಷಗಳಿದ್ದರೂ ಒಂದು ಚೂರು ಜಗ್ಗದೆ ಒಳ್ಳೆಯ ರೀತಿಯಲ್ಲಿ 7 ವರ್ಷಗಳ ಕಾಲ ಅಡಳಿತ ನಡೆಸಿದರು. ಅದನ್ನು ನಾವು ಸ್ಮರಿಸಬೇಕು. ಗುಜರಾತ್ ಗಲಾಟೆ ಆದ ಸಂದರ್ಭದಲ್ಲೂ ಅವರು ಮೋದಿಯವರಿಗೆ ರಾಜ ಧರ್ಮ ಪಾಲನೆ ಮಾಡಲು ಹೇಳಿದರು. ಅಂತಹ ಸತ್ಯ, ನ್ಯಾಯದ ಪರವಾಗಿದ್ದ ವಾಜಪೇಯಿ ಅವರನ್ನು ನಾವು ನೆನಪಿಸಿಕೊಳ್ಳಬೇಕು ಎಂದರು

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಾಗ ಪುತ್ತೂರಿನ ಅನೇಕ ಹಿರಿಯರು ಅವರನ್ನು ಗೌರವಿಸಿದ್ದಾರೆ. ಸಮಗ್ರತೆ, ಒಳಗೊಳ್ಳುವಿಕೆ ಮತ್ತು ಪ್ರಗತಿಯ ಸಂಕೇತವಾಗಿ ಅವರು ನಮ್ಮ ನೆನಪುಗಳಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ. ಅವರು ಭಾರತದ ಅತ್ಯುತ್ತಮ ನಾಯಕರಲ್ಲಿ ಒಬ್ಬರು, ಅವರು ಇತಿಹಾಸದಲ್ಲಿ ತಮ್ಮನ್ನು ತಾವು ದಾರ್ಶನಿಕ ನಾಯಕತ್ವ, ಅತ್ಯುತ್ತಮ ವಾಗ್ಮಿ ಮತ್ತು ಸಾರ್ವಜನಿಕ ಸೇವೆಗಳಿಗೆ ಅಚಲ ಬದ್ಧತೆಯಿಂದ ಗುರುತಿಸಿಕೊಂಡರು ಎಂದರು.

ಬಿಜೆಪಿ ಜಿಲ್ಲಾ ಮುಖಂಡ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಜಿಲ್ಲಾ ಪ್ರಮುಖ ಚಂದ್ರಶೇಖರ್ ರಾವ್ ಬಪ್ಪಳಿಗೆ ಮಾತನಾಡಿದರು.

ಜಿ.ಎಲ್ ಆಚಾರ್ಯ ಅವರ ಮನೆಯಲ್ಲಿ ಜಿ.ಎಲ್ ಬಲರಾಮ ಆಚಾಯ್, ಪತ್ನಿ ರಾಜೀ ಬಲರರಾಮ ಅಚಾರ್ಯ, ಪುತ್ರರು ಮತ್ತು ಮನೆ ಮಂದಿ ಉಪಸ್ಥಿತರಿದ್ದರು. ಸಂಜೀವ ಶೆಟ್ಟಿಯವರ ಮನೆಯಲ್ಲಿ ಅವರ ಪುತ್ರರಾದ ಮುರಳೀಧರ ಶೆಟ್ಟಿ, ಮನೋಹರ್, ಗಿರಿಧರ್, ಶಿವಕುಮಾರ್ ಮತ್ತು ಮನೆಯವರು ಉಪಸ್ಥಿತರಿದ್ದರು. ಡಾ.ಎಂ.ಕೆ.ಪ್ರಸಾದ್ ಅವರ ಮನೆಯಲ್ಲಿ ಅವರ ಪತ್ನಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪುತ್ರಿ ಅಶ್ವಿನಿ ಉಪಸ್ಥಿತರಿದ್ದರು.

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ತೆಂಕಿಲ, ನಾಗೇಶ್ ಪ್ರಭು, ಕಾರ್ಯದರ್ಶಿ ಶಶಿಧರ್ ನಾಯಕ್, ಉಪಾಧ್ಯಕ್ಷ ನಾಗೇಂದ್ರ ಬಾಳಿಗ, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,  ನಗರಸಭೆ ಸದಸ್ಯರಾದ ಜೀವಂಧರ್ ಜೈನ್, ದೀಕ್ಷಾ ಪೈ, ಸಂತೋಷ್ ಬೊಳುವಾರು, ಮನೋಹರ್ ಕಲ್ಲಾರೆ, ಶ್ರೀಧರ ಪಟ್ಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ಕೊರಾಂಗ, ನಿರಂಜನ್ ಕೊಬುಟ್ಟು, ಶಶಿಧರ್ ಸಪಲ್ಯ, ಜಯಕಾರೆಕ್ಕಾಡು, ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ಕಲ್ಲೇಗ, ಆಶಾ ಭಗವನ್, ದಯಾನಂದ ಕರ್ಮಲ, ದಯಾಕರ್ ಹೆಗ್ಡೆ, ಶಿವರಾಮ ಗೌಡ, ಲೋಕೇಶ್, ಲೋಕೇಶ್ ಪೂಜಾರಿ, ದಯಾನಂದ ಕೆ, ನಿರಂಜನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಕಾರ್ಯಕ್ರಮ ಸಂಚಾಲಕ ಯುವರಾಜ್ ಪೆರಿಯತ್ತೋಡಿ ಮತ್ತು ಸಹ ಸಂಚಾಲಕಿ ವಸಂತ ಲಕ್ಷ್ಮೀ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top