ಪಾಕಿಸ್ಥಾನ-ನ್ಯೂಜಿಲ್ಯಾಂಡ್ ನಡುವೆ ಕರಾಚಿಯಲ್ಲಿ ಇಂದು ಮೊದಲ ಪಂದ್ಯ
ಇಸ್ಲಾಮಾಬಾದ್: ಎಂಟು ರಾಷ್ಟ್ರಗಳು ಭಾಗವಹಿಸುವ ಐಸಿಸಿ ಪ್ರಾಯೋಜಿತ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟ ಇಂದಿನಿಂದ ಶುರುವಾಗುತ್ತಿದೆ. ಮೊದಲ ಪಂದ್ಯ ಆತಿಥೇಯ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ನಡುವೆ ಕರಾಚಿ ಮೈದಾನದಲ್ಲಿ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
ಎ ಗುಂಪಿನಲ್ಲಿ ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ಥಾನ, ಬಾಂಗ್ಲಾದೇಶ ಇದ್ದರೆ, ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ಥಾನ ಮತ್ತು ಇಂಗ್ಲೆಂಡ್ ತಂಡಗಳಿವೆ. ಭಾರತ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ ಮತ್ತು ಪಾಕಿಸ್ಥಾನದ ವಿರುದ್ದದ ಹೈವೋಲ್ಟೇಜ್ ಪಂದ್ಯ ಫೆ.23ರಂದು ನಡೆಯಲಿದೆ. ಟೀಂ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಕೊನೆಯ ಟೂರ್ನಿ ಆಗುವ ಸಾಧ್ಯತೆಗಳಿವೆ. ಕಳೆದ ವರ್ಷಾಂತ್ಯದಲ್ಲಿ ಆಸೀಸ್ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲು ಕಂಡ ಬಳಿಕ ರೋಹಿತ್ ಟೆಸ್ಟ್, ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳುವುದಕ್ಕೆ ಮುಂದಾಗಿದ್ದರು. ಆದರೆ ಬಿಸಿಸಿಐ ಒತ್ತಾಯದ ಮೇರೆಗೆ ಮುಂದುವರಿದಿದ್ದಾರೆ. 2013ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ಟ್ರೋಫಿಗೆ ಮುತ್ತಿಟ್ಟಾಗಲೂ ಈ ಮೂವರು ಟೂರ್ನಿಯಲ್ಲಿದ್ದರು.
2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ರೋಹಿತ್, ಕೊಹ್ಲಿ, ಜಡೇಜಾ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ, ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದಾರೆ. ಜಡೇಜಾ ಎಂದಿನಂತೆ ತಮ್ಮ ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಸಾಮರ್ಥ್ಯ ಪ್ರದರ್ಶನ ತೋರಿದ್ದಾರೆ. ಆದರೆ ಕಳೆದ ವರ್ಷಾಂತ್ಯದಲ್ಲಿ ಆಸೀಸ್ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಬಳಿಕ ಕಳಪೆ ಫಾರ್ಮ್ ಮುಂದುವರಿದಿದೆ. ರಣಜಿ ಕ್ರಿಕೆಟ್‌ನಲ್ಲೂ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಸರಣಿಯ 3ನೇ ಪಂದ್ಯದಲ್ಲಿ ಕೊಹ್ಲಿ ಕೂಡ ಅರ್ಧಶತಕ ಸಿಡಿಸಿ ಟೀಕೆಗಳಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟರು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದೇ ಫಾರ್ಮ್ ಮುಂದುವರಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.