ನೆರೆರಾಜ್ಯಗಳಲ್ಲಿ ಹಕ್ಕಿಜ್ವರ ಹಾವಳಿ : ರಾಜ್ಯದಲ್ಲಿ ಕಟ್ಟೆಚ್ಚರ

ಮಹಾರಾಷ್ಟ್ರದಲ್ಲಿ ಹುಲಿ, ಚಿರತೆ, ಕಾಗೆಗಳಿಗೂ ಹಕ್ಕಿಜ್ವರ

ಬೆಂಗಳೂರು: ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ ಹುಲಿ, ಚಿರತೆ, ಕಾಗೆಗಳಲ್ಲೂ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹಕ್ಕಿಜ್ವರದಿಂದ ಕಾಗೆಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ. ಆಂಧ್ರ, ತೆಲಂಗಾಣದಲ್ಲಿ H5N1 ವೈರಸ್​ನಿಂದ ಉಂಟಾಗುವ ಸೋಂಕಿನಿಂದ ಕೋಳಿಗಳು ಮೃತಪಡುತ್ತಿವೆ. ಪರಿಣಾಮವಾಗಿ ಕರ್ನಾಟಕದ ಗಡಿ ಭಾಗಗಳಲ್ಲಿ ಆತಂಕ ಉಂಟಾಗಿದೆ.

ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ಕೋಳಿಗಳ ಮಾರಣಹೋಮವೇ ನಡೆಯುತ್ತಿದೆ. ಸಂಯುಕ್ತ ನೆಲ್ಲೂರು ಜಿಲ್ಲೆಯ ಗುಡೂರು, ಸುಳ್ಳೂರುಪೇಟ, ನಾಯ್ಡುಪೇಟ ಮತ್ತು ವೆಂಕಟಗಿರಿ ಪ್ರದೇಶಗಳಲ್ಲಿ ಚಿಕನ್ ಶಾಪ್​ಗಳಲ್ಲಿ ನೂರಾರು ಕೋಳಿಗಳು ಸಾಯುತ್ತಿವೆ. ಕೋಳಿ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದು, ಚಿಕನ್ ಶಾಪ್ ಮಾಲೀಕರು ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ.
ಹಕ್ಕಿಜ್ವರದಿಂದ ಸತ್ತ ಕೋಳಿಗಳನ್ನ ಮಣ್ಣು ಮಾಡುವ ಬದಲಾಗಿ ಮೀನುಗಳಿಗೆ ಆಹಾರವಾಗಿ ಹಾಕಲಾಗುತ್ತಿದೆ. ಇದೇ ಮೀನುಗಳನ್ನು ತಿನ್ನುವ ಜನರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ನಗರಸಭೆ, ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

































 
 

ಬೇರೆ ರಾಜ್ಯಗಳಿಂದ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಬೀದರ್‌, ಬೆಳಗಾವಿ, ಬಳ್ಳಾರಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಬೇರೆ ರಾಜ್ಯಗಳಿಂದ ಬರುವ ಕೋಳಿ ಹಾಗೂ ಮೊಟ್ಟೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ರಾಜ್ಯದಲ್ಲಿ ಹಕ್ಕಿಜ್ವರ ಇಲ್ಲದಿದ್ರೂ, ಬಿಸಿಲಿನ ತಾಪದ ಪರಿಣಾಮ ಕೋಳಿ ಮಾಂಸ ವ್ಯಾಪಾರ ಕಡಿಮೆಯಾಗಿದೆ. ಮಹಾರಾಷ್ಟ್ರದ ಲಾತೂರ್​ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಗಡಿಭಾಗದ ತಾಲೂಕುಗಳಲ್ಲಿ ಪಶುಸಂಗೋಪನಾ ಇಲಾಖೆ ಹೈಅಲರ್ಟ್ ಘೋಷಿಸಿದೆ. ಮಹಾರಾಷ್ಟ್ರದಿಂದ ತರುವ ಕೋಳಿಮಾಂಸ, ಮೊಟ್ಟೆ ಮಾರಾಟಕ್ಕೆ ನಿಷೇಧ ವಿಧಿಸಿದೆ. ಭಾಲ್ಕಿ, ಕಮಲನಗರ, ಬಸವಕಲ್ಯಾಣ, ಔರಾದ್ ತಾಲೂಕಿನ ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ತಪಾಸಣೆ ಮಾಡಲಾಗ್ತಿದೆ.
ಜ್ವರ, ಕೆಮ್ಮು, ಗಂಟಲು ನೋವು, ಸ್ನಾಯು ನೋವು, ವಾಂತಿಭೇದಿ, ನೆಗಡಿ, ಉಸಿರಾಟದ ತೊಂದರೆ ಇವುಗಳು ಹಕ್ಕಿಜ್ವರದ ಲಕ್ಷಣಗಳಾಗಿವೆ. 2020ರಲ್ಲಿ ರಾಜ್ಯದಲ್ಲಿ ರಂಗನತಿಟ್ಟುವಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು. ಸದ್ಯ ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಆದರೆ ರಾಜ್ಯಾದ್ಯಂತ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top