ಐಎಸ್‌ಐ ಏಜೆಂಟ್ ಹನಿಟ್ರ್ಯಾಪ್‌ಗೆ ಬಿದ್ದು ಮಹತ್ವದ ಮಾಹಿತಿಗಳನ್ನು ನೀಡಿದ್ದ ನೌಕರರು
ಕಾರವಾರ : ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದುಗಾ ಗ್ರಾಮದ ವೇತನ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಎಂಬಿಬ್ಬರನ್ನು ಹೈದರಾಬಾದ್ ಮೂಲದ ಎನ್ಐಎ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್ಐಎ ತಂಡ ಸೋಮವಾರ ಕಾರವಾರಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದೆ.
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದ ಎನ್ಐಎ ನೋಟಿಸ್ ನೀಡಿ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಪ್ರಕರಣ ಸಂಬಂಧ ಮತ್ತೆ ತನಿಖೆ ನಡೆಸಲು ಬಂದಿದ್ದ ಎನ್ಐಎ ತಂಡ ಇಬ್ಬರನ್ನು ಬಂಧಿಸಿದೆ.
ಶಂಕಿತ ಆರೋಪಿಗಳನ್ನು ಹನಿಟ್ರ್ಯಾಪ್ ಮಾಡಿದ್ದ ಪಾಕಿಸ್ಥಾನಿ ಏಜೆಂಟ್ ಮಾಹಿತಿ ಕಲೆ ಹಾಕಿದ್ದಳು. ಫೇಸ್‌ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಪಾಕಿಸ್ಥಾನಿ ಏಜೆಂಟ್, ಆರೋಪಿಗಳಾದ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಳು. ಇದಾದ ಬಳಿಕ 2023ರಲ್ಲಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು.
ಈ ಹಿಂದೆ ಕಾರವಾರದ ಚೆಂಡ್ಯಾದಲ್ಲಿರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ತೋಡೂರಿನ ಸುನೀಲ್ ಮಾತ್ರ ಹಿಂದೆ ಸೀಬರ್ಡ್ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ಆಮೇಲೆ ಚಾಲಕ ವೃತ್ತಿ ಮಾಡುತ್ತಿದ್ದ. ಈ ಹಿಂದೆ ವಶಕ್ಕೆ ಪಡೆದವರನ್ನು ಇದೀಗ ಮತ್ತೆ ವಿಚಾರಣೆಗೆ ಒಳಪಡಿಸಿ, ಹೊಸ ಲಿಂಕ್‌ನ ಬಗ್ಗೆ ತನಿಖೆ ನಡೆಸಲು ಎನ್ಐಎ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ನೌಕಾನೆಲೆ ಮಾಹಿತಿ ಸೋರಿಕೆ ಸಂಬಂಧಿಸಿ ಇಂದು ನೌಕಾನೆಲೆ ಅಧಿಕಾರಿಗಳನ್ನು ಎನ್ಐಎ ಅಧಿಕಾರಿಗಳ ತಂಡ ಭೇಟಿಯಾಗಲಿದೆ. ಪ್ರಕರಣದಲ್ಲಿ ಇನ್ನಷ್ಟು ಜನರು ಶಾಮೀಲಾಗಿರುವ ಅನುಮಾನದ ಕಾರಣ ಮತ್ತಷ್ಟು ತನಿಖೆ ನಡೆಯಲಿದೆ.