ಪುತ್ತೂರು : ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಅಳವಡಿಸುವ ಎಲ್ಲ ಜಾಹಿರಾತುದಾರರ ಗಮನಕ್ಕೆ, ಯಾವುದೇ ಜಾಹಿರಾತು ಪ್ಲೆಕ್ಸ್, ಬ್ಯಾನರ್, ಹೋರ್ಡಿಂಗ್, ಬಂಟಿಂಕ್ಸ್, ಪೋಸ್ಟರ್ ಗಳನ್ನು ನಗರಸಭೆ ಅನುಮತಿ ಇಲ್ಲದೇ, ಶುಲ್ಕ ಪಾವತಿಸದೇ ಪ್ರದರ್ಶನ ಮಾಡುವುದು ಕಾನೂನು ಬಾಹಿರವಾಗಿದೆ. ಅದರಲ್ಲೂ ಅರ್ಜಿ ನೀಡಿ ಶುಲ್ಕ ಪಾವತಿಸದೇ ವಂಚಿಸುವುದು ಅಪರಾಧವಾಗಿದೆ. ಅರ್ಜಿ ನೀಡಿ, ಪರಿಶೀಲನೆ ನಡೆಸದೆ ಫಲಕ ಅಳವಡಿಸುತ್ತಿದ್ದು, ಕೆಲವು light ಕಂಬ, ಆಕ್ಸಿಡೆಂಟ್ ಜೋನ್, ಪಾದಚಾರಿಗಳು ನಡೆದಾಡುವ ರಸ್ತೆಯಲ್ಲಿ, ಇನ್ನಿತರ ನಿಷೇಧಿತ ಅಳವಡಿಸುವುದರಿಂದ ಸಾರ್ವಜನಿಕರಿಗೆ ವಾಹನಕ್ಕೆ ತೊಂದರೆಯಾಗುತ್ತಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಜಾಹಿರಾತುದಾರರಿಗೆ ಸೂಚನೆ ನೀಡಿದ್ದರೂ, ಯಾರೂ ಕಾನೂನನ್ನು ಲೆಕ್ಕಿಸದೆ ಶುಲ್ಕ ವಂಚನೆ ಮಾಡಿ ಎಲ್ಲ ಅನಧಿಕೃತ ಫಲಕ ಅಳವಡಿಸುತ್ತಿದ್ದಾರೆ. ನಾಳೆ ಫೆ. 19, 2025ರಂದು ಬೆಳಗ್ಗೆಯಿಂದ ಅನಧಿಕೃತ, ಅವಧಿ ಮುಕ್ತಾಯಗೊಂಡ ಜಾಹಿರಾತುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಜಾಹಿರಾತುದಾರರು ತಮ್ಮ ಫಲಕಗಳನ್ನು ಶುಲ್ಕ ಪಾವತಿಸಿ ಅನುಮತಿ ಪಡಕೊಳ್ಳುವುದು. ಹಾಗೂ ಶುಲ್ಕ ಪಾವತಿಸಿರುವ ಅನುಮತಿಯನ್ನು ಜಾಹಿರಾತು ಗಳಲ್ಲಿ ಅಳವಡಿಸುವುದು. ಅಂತಹ ಪ್ರಕರಣಗಳಿಗೆ ಸಂಬಂದಿಸಿದಂತೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಇನ್ನು ಕೆಲವರು ಅನಧಿಕೃತ ಜಾಹಿರಾತನ್ನು ರಾತ್ರಿ ವೇಳೆ ಅಳವಡಿಸುತ್ತಿದ್ದು ನಗರಸಭೆಗೆ ಅರ್ಜಿ ನೀಡಿ ಜಾಹಿರಾತು ಶುಲ್ಕ ಪಾವತಿ ಮಾಡದೇ ವಂಚಿಸುತ್ತಿರುವುದು ಕಂಡು ಬಂದಿರುತ್ತದೆ. ರಸ್ತೆ ಮಾರ್ಜಿನ್ ನಲ್ಲಿ, ವಿದ್ಯುತ್ ಕಂಬಗಳಿಗೆ, ಸರಕಾರಿ ಖಾಸಗಿ ಕಟ್ಟಡದಲ್ಲಿ ಡಿವೈಡರ್, ಇತ್ಯಾದಿ ಎಲ್ಲ ಕಡೆಗಳಲ್ಲಿ ಬೃಹತ್ ಗಾತ್ರದ ಜಾಹೀರಾತುಗಳು ರಾರಾಜಿಸುತ್ತಿದೆ. ಈ ಬಗ್ಗೆ ಯಾವುದೇ ಜಾಹಿರಾತುದಾರರು ಕ್ರಮ ಕೈಗೊಂಡಿರುವುದಿಲ್ಲ.
ಆದುದರಿಂದ ಫೆ. 19, 2025ರಂದು ಬೆಳಗ್ಗಿನಿಂದ ಎಲ್ಲ ಅನಧಿಕೃತ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ. ಇನ್ನು ಮುಂದೆ ಕಚೇರಿಯಿಂದ ತೆರವುಗೊಳಿಸಿದ ಯಾವುದೇ ಪ್ಲೆಕ್ಸ್ ಜಾಹಿರಾತನ್ನು ಮರು ನೀಡಲಾಗುವುದಿಲ್ಲ. ಈ ಬಗ್ಗೆ ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ನಿಯಮ 133 ರಿಂದ 136 ಹಾಗೂ ಕರ್ನಾಟಕ ತೆರೆದ ಪ್ರದೇಶಗಳ ವಿರೂಪ ತಡೆಗಟ್ಟುವ ಕಾಯಿದೆ 1981 (Karnataka open places prevention of disfigurement act 1981)ಯಡಿ ಕ್ರಮ ಕೈಗೊಳ್ಳಲಾಗುವುದೆಂದು ನಗರಸಭಾ ಪ್ರಕಟಣೆ ತಿಳಿಸಿದೆ.