ಕುಡಿಯುವ ನೀರಿನಲ್ಲಿ ಕಾರು ತೊಳೆದರೆ 5 ಸಾವಿರ ರೂ. ದಂಡ!

ಜಲಕ್ಷಾಮ ಎದುರಿಸಲು ನೀರಿನ ಮಿತ ಬಳಕಗೆ ಸೂಚನೆ

ಬೆಂಗಳೂರು: ಬೆಂಗಳೂರಿನಲ್ಲಿ ಕುಡಿಯುವ ನೀರಿನಲ್ಲಿ ಕಾರು ತೊಳೆದರೆ ಬರೋಬ್ಬರಿ 5 ಸಾವಿರ ರೂ. ದಂಡ ಬೀಳಲಿದೆ. ಈ ಬಾರಿ ಬೇಸಿಗೆ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಮುನ್ಸೂಚನೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸುವುದು ಸೇರಿದಂತೆ ಹಲವು ಮಹತ್ವದ ಸೂಚನೆಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶನ ನೀಡಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ಮಳೆ ಕೊರತೆ ಹಾಗೂ ತೀವ್ರ ಬಿಸಿಲಿನಿಂದಾಗಿ ಭಾರಿ ಸಮಸ್ಯೆ ಆಗಿತ್ತು. ಬೆಂಗಳೂರು ಮಹಾನಗರದಲ್ಲಿ ಕಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1.40 ಕೋಟಿ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ ಎಂದು ಜಲಮಂಡಳಿ ಹೇಳಿದೆ. ನೀರು ಪೋಲು ಮಾಡುವುದನ್ನು ತಡೆಗಟ್ಟಲು ಸಾರ್ವಜನಿಕರು ಮಿತವಾಗಿ ಬಳಸುವಂತೆ ಸೂಚಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ ಎಂದು ಜಲಮಂಡಳಿ ಹೇಳಿದೆ.

































 
 

ವಾಹನಗಳನ್ನು ತೊಳೆಯುವುದಕ್ಕೆ, ಕೈತೋಟಕ್ಕೆ, ಕಟ್ಟಡಗಳ ನಿರ್ಮಾಣಕ್ಕೆ, ಮನರಂಜನೆಯ ಉದ್ದೇಶದಿಂದ ಬಳಸುವ ಕಾರಂಜಿಯಂತಹ ವ್ಯವಸ್ಥೆಗಳಿಗೆ, ಸಿನಿಮಾ ಮಂದಿರ ಹಾಗೂ ಮಾಲ್‌ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರ ಬಳಕೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಕಾವೇರಿ ನೀರನ್ನು ಬಳಸದಂತೆ ಹಾಗೂ ಅನವಶ್ಯಕವಾಗಿ ನೀರು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ 5000 ರೂ. ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮತ್ತೆ ಮಾಡಿದರೆ ದಂಡ ಮೊತ್ತ 5000 ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿಯಂತೆ ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರು ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916 ಗೆ ತಿಳಿಸಬಹುದಾಗಿದೆ ಎಂದು ಜಲಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top