ಅನ್ನಭಾಗ್ಯದ ದುಡ್ಡೂ ಬಂದಿಲ್ಲ, ಗೃಹಲಕ್ಷ್ಮಿ ಹಣವೂ ಜಮೆಯಾಗಿಲ್ಲ…

ಕೆಲವು ತಿಂಗಳಿಂದ ಸ್ಥಗಿತಗೊಂಡಿರುವ ಗ್ಯಾರಂಟಿಗಳು

ಬೆಂಗಳೂರು: ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಘೋಷಿಸಿದ ಎರಡು ಮಹತ್ವಾಕಾಂಕ್ಷಿ ಗ್ಯಾರಂಟಿಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನೀಡುತ್ತಿದ್ದ ಹಣ ಕೆಲ ತಿಂಗಳಿಂದ ಸ್ಥಗಿತಗೊಂಡಿದ್ದು, ಜನ ಗೊಂದಲದಲ್ಲಿದ್ದಾರೆ.
ಅನ್ಯಭಾಗ್ಯದಡಿ ಬಿಪಿಎಲ್‌ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ ಹಣ 5 ತಿಂಗಳಿನಿಂದ ಸ್ಥಗಿತಗೊಂಡಿದ್ದರೆ ಗೃಹಲಕ್ಷ್ಮಿ ಹಣ 3 ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ.
ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದೆ ಇದ್ದಾಗ ರಾಜ್ಯ ಸರ್ಕಾರ ಅನ್ನಭಾಗ್ಯದ ಹಣ ನೀಡಲಾಗುವುದು ಎಂದು ತಿಳಿಸಿತ್ತು.
ಅದರಂತೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂ. ಪಾವತಿ ಮಾಡಬೇಕಿತ್ತು. ಒಂದು ಪಡಿತರ ಕುಟುಂಬದಲ್ಲಿ ಐವರು ಸದಸ್ಯರಿದ್ದರೆ 20 ಕೆಜಿಗೆ ಅಕ್ಕಿಗೆ ಪ್ರತಿ ತಿಂಗಳು 850 ರೂ. ಜಮೆ ಮಾಡಬೇಕಿತ್ತು. ಈ ವಿಚಾರದ ಬಗ್ಗೆ ಫಲಾನುಭವಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣದ ಬದಲಿಗೆ ಅಕ್ಕಿಯನ್ನೇ ನೀಡಲಾಗುವುದು ಅಂತ ಹೇಳುತ್ತಿದ್ದಾರೆ.
ಕುಟುಂಬದ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿಂದ ಪಾವತಿಯಾಗಿಲ್ಲ. ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಎಂಬ ಕಾರಣ ನೀಡಿ ಸರಿಯಾದ ಸಮಯಕ್ಕೆ ಪಾವತಿ ಆಗುತ್ತಿರಲಿಲ್ಲ. ಈಗ ಯಾವ ಕಾರಣಕ್ಕೆ ಪಾವತಿಯನ್ನು ನಿಲ್ಲಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.
ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ದುಡ್ಡು ಕೊಡುತ್ತೇವೆ ಅಂತ ಹೇಳಿದ್ರು. 10 ಕೆಜಿ ಅಕ್ಕಿ ಸಿಗುತ್ತೆ ಎಂದಿದ್ದರು. ಚುನಾವಣಾ ಸಮಯದಲ್ಲಿ ಮನೆಗೆ ಮನೆಗೆ ಬಂದು ಕಾರ್ಡ್‌ ಹಂಚಿ ಹೋಗಿದ್ದರು. ಈಗ ಅಕ್ಕಿಯೂ ಇಲ್ಲ, ದುಡ್ಡೂ ಇಲ್ಲ. ಈ ರೀತಿ ಅನ್ಯಾಯ ಮಾಡುವುದು ಸರಿಯೇ? ಕೂಡಲೇ ಸರ್ಕಾರ ಘೋಷಣೆ ಮಾಡಿದಂತೆ ಹಣ್‌ ಮತ್ತು ಅಕ್ಕಿ ನೀಡಬೇಕು ಎಂದು ಫಲಾನುಭವಿಗಳು ಆಗ್ರಹಿಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top