ಗಾಬರಿಯಾಗದಿರಲು ಪ್ರಧಾನಿ ಮೋದಿ ಮನವಿ
ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಇಂದು ಬೆಳ್ಳಂಬೆಳಗ್ಗೆ 4.0 ತೀವ್ರತೆಯ ಭೂಕಂಪ ಸಂಭವಿಸಿ ಜನರು ಗಾಬರಿಯಾದರು. ದಿಲ್ಲಿಯ ದೌಲಾಖಾನ್‌ನಲ್ಲೇ ಭೂಕಂಪ ಕೇಂದ್ರ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ 5.36ರ ಹೊತ್ತಿಗೆ ಭೂಕಂಪ ಸಂಭವಿಸಿದ್ದು, ಹಲವು ಕಿಲೋಮೀಟರ್‌ಗಳಷ್ಟು ದೂರ ಕಂಪನದ ಅನುಭವ ಅಗಿದೆ. ವಸತಿ ಪ್ರದೇಶಗಳಲ್ಲಿ ಜನರಿಗೆ ಸ್ಪಷ್ಟವಾಗಿ ಕಂಪನದ ಅನುಭವವಾಗಿದ್ದು, ಅನೇಕರು ಗಾಬರಿಯಾಗಿ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಭೂಕಂಪದಿಂದ ಹಾನಿ ಸಂಭವಿಸಿದ ಕುರಿತು ವರದಿಯಾಗಿಲ್ಲ.
ಗಾಬರಿಯಾಗದಿರಲು ಮೋದಿ ಮನವಿ
ಪ್ರಧಾನಿ ನರೇಂದ್ರ ಮೋದಿ ಕಂಪನ ಸಂಭವಿಸಿದ ಕೂಡಲೇ ಜನರಿಗೆ ಗಾಬರಿಯಾಗದಿರಲು ಮನವಿ ಮಾಡಿದ್ದಾರೆ. ಎಲ್ಲರೂ ಸುರಕ್ಷಾ ನಿಯಮಗಳನ್ನು ಪಾಲಿಸಿ ಶಾಂತವಾಗಿರಿ. ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಮೋದಿ ಜನರಿಗೆ ಧೈರ್ಯ ತುಂಬಿದ್ದಾರೆ.
ದೌಲಾಖಾನ್‌ನ ದುರ್ಗಾಬಾಯಿ ದೇಶ್‌ಮುಖ್ ಕಾಲೇಜಿನ ಬಳಿ ಭೂಕಂಪದ ಕೇಂದ್ರವಿತ್ತು. ಇಲ್ಲಿರುವ ಕೆರೆಯಲ್ಲಿ 2-3 ವರ್ಷಗಳಿಗೊಮ್ಮೆ ಲಘು ಕಂಪನದ ಅನುಭವವಾಗುವುದು ಸಾಮಾನ್ಯ. ಆದರೆ ಇಂದು ಸಂಭವಿಸಿದ ಕಂಪನ ತುಸು ತೀವ್ರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯಲ್ಲಿರುವ ಹಲವು ರಾಜಕೀಯ ನಾಯಕರಿಗೂ ಭೂಕಂಪದ ಅನುಭವ ಆಗಿದ್ದು, ಜನರು ಸುರಕ್ಷಿತವಾಗಿರಲು ಅವರು ಮನವಿ ಮಾಡಿದ್ದಾರೆ. ಬಿಜೆಪಿ ನಾಯಕ ತೇಂಜಿಂದರ್ ಸಿಂಗ್ ಬಗ್ಗಾ, ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಮತ್ತಿತರರು ಭೂಕಂಪದ ಅನುಭವವಾಯಿತು ಎಂದು ಹೇಳಿಕೊಂಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಲು ಪ್ರಾರ್ಥಿಸಿದ್ದೇನೆ ಎಂದು ದಿಲ್ಲಿಯ ಉಸ್ತುವಾರಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಹೇಳಿಕೊಂಡಿದ್ದಾರೆ.